ಬೆಂಗಳೂರು,ಮೇ30(Daijiworld News/AZM): ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯು ಬುಧವಾರ ನಡೆದಿದ್ದು,ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಯಬೇಕೆಂಬ ನಿರ್ಣಯಕ್ಕೆ ಸರ್ವಾನುಮತದಿಂದ ಬೆಂಬಲ ವ್ಯಕ್ತವಾಯಿತು.
ಅಶೋಕಾ ಹೋಟೆಲ್ನಲ್ಲಿ ನಡೆದ ಈ ಸಭೆಗೆ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ, ರೋಷನ್ ಬೇಗ್, ರಾಮಲಿಂಗಾ ರೆಡ್ಡಿ, ರಾಜೇಗೌಡ, ನಾರಾಯಣರಾವ್, ಭೈರತಿ ಬಸವರಾಜ್ ಮತ್ತು ಸುಬ್ಬಾರೆಡ್ಡಿ ಗೈರಾಗಿದ್ದರು. ಇವರಲ್ಲಿ ರೋಷನ್ ಬೇಗ್ ಮತ್ತು ರಮೇಶ್ ಜಾರಕಿಹೊಳಿ ಹೊರತುಪಡಿಸಿ ಉಳಿದವರು ಅನುಮತಿ ಪಡೆದು ಗೈರಾಗಿದ್ದರು.
ಸಭೆಯಲ್ಲಿ ಹಲವು ಮಹತ್ವದ ಚರ್ಚೆಗಳು ನಡೆದವು. ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಡ ಬಳಿಕ ಕಾಂಗ್ರೆಸ್ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಲಾಯಿತು. ಭಿನ್ನಮತೀಯರ ಅಸಮಾಧಾನವನ್ನು ಕೊನೆಗಾಣಿಸುವ ಪ್ರಯತ್ನ ಮಾಡಲಾಯಿತು. ಬಿಜೆಪಿಗೆ ಹೋದರೆ ಆಗುವ ನಷ್ಟದ ಬಗ್ಗೆ ರೆಬೆಲ್ ಶಾಸಕರಿಗೆ ಮನವರಿಕೆ ಮಾಡಿಕೊಡಲಾಯಿತು.
ಕಾಂಗ್ರೆಸ್ನಿಂದ ಅಮಾನತಾಗಿದ್ದ ಕಂಪ್ಲಿ ಗಣೇಶ್ ಅವರಿಗೆ ಕೊನೆಯ ಕ್ಷಣದಲ್ಲಿ ವಿನಾಯಿತಿ ನೀಡಲಾಯಿತು. ಶಾಸಕಾಂಗ ಸಭೆಗೂ ಮುನ್ನ ಕಾಂಗ್ರೆಸ್ ಪಕ್ಷವು ಜೆ.ಎನ್. ಗಣೇಶ್ ವಿರುದ್ಧ ವಿಧಿಸಿದ್ದ ಅಮಾನತು ಆದೇಶವನ್ನು ವಾಪಸ್ ಪಡೆಯಿತು. ಈ ಹಿನ್ನೆಲೆಯಲ್ಲಿ ಕಂಪ್ಲಿ ಗಣೇಶ್ ಅವರು ಸಿಎಲ್ಪಿ ಸಭೆಗೆ ಹಾಜರಾದರು.