ನವದೆಹಲಿ,ಮೇ 30 (Daijiworld News/MSP): ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನಿಂದ ಕಂಗೆಟ್ಟರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಸ್ಥಾನಕ್ಕೆ ಬೇರೊಬ್ಬರನ್ನು ನೇಮಕ ಮಾಡಿ ನೇರ ಸಂದೇಶ ನೀಡಿದ್ದು ಹೀಗಾಗಿ ಅವರ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಕಾಣುತ್ತಿಲ್ಲ.
ಹೀನಾಯವಾಗಿ ಸೋತ ಪೂರ್ತಿ ಹೊಣೆಯನ್ನು ತಾವೇ ಹೊತ್ತುಕೊಂಡು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಹೊರಟ ರಾಹುಲ್ ತಮ್ಮ ಆಪ್ತರಿಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಒಬಿಸಿ ಅಥವಾ ಎಸ್ಸಿ/ಎಸ್ಟಿ ಹೊಸ ಮುಖದ ನಾಯಕರನ್ನು ಹುಡುಕಿ ಎಂದು ಕೇಳಿಕೊಂಡಿದ್ದಾರೆ.
ಈ ನಡುವೆ ಪಕ್ಷದ ಹಿರಿಯ ನಾಯಕರಾದ ರಾಹುಲ್ ಗಾಂಧಿಗೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದಂತೆ ಒತ್ತಡ ಹಾಕುವುದನ್ನು ಮುಂದುವರಿಸಿದ್ದಾರೆ. ಆದರೂ ತಮ್ಮ ನಿರ್ಧಾರವನ್ನು ರಾಹುಲ್ ಹಿಂಪಡೆಯುವಂತೆ ಕಾಣಿಸುತ್ತಿಲ್ಲ.
ರಾಹುಲ್ ತಮ್ಮ ನಿರ್ಧಾರ ಅಚಲ ಎಂದಿರುವುದರಿಂದ ಪಕ್ಷದ ಹಲವು ನಾಯಕರು ಬುಧವಾರ, ದೆಹಲಿಯಲ್ಲಿನ ರಾಹುಲ್ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಕೂಡಲೇ ರಾಹುಲ್ ರಾಜೀನಾಮೆ ನಿರ್ಧಾರವನ್ನು ವಾಪಾಸ್ ಪಡೆಯಬೇಕು ಎಂದು ದೆಹಲಿ ಕಾಂಗ್ರೆಸ್ ಘಟಕದ ನಾಯಕರು ಒತ್ತಾಯಿಸಿದ್ದಾರೆ. ಹೀಗೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.