ಅಸ್ಸಾಂ,ಮೇ30(DaijiworldNews/AZM):ತನ್ನ ಪತಿ ಕಿರುಕುಳ ನೀಡುತ್ತಿದ್ದಾನೆ ಅನ್ನುವ ಕಾರಣಕ್ಕಾಗಿ ಪತ್ನಿ ಆತನ ತಲೆಯನ್ನು ಕಡಿದು ತಲೆಯೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿರುವ ಘಟನೆ ಅಸ್ಸಾಂನ ಲಖೀಂಪುರ್ ಜಿಲ್ಲೆಯ ಮಝಗಾಂವ್ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ಗುಣೇಶ್ವರಿ ಬರ್ಕಟಕಿ (48) ಎಂದು ಗುರುತಿಸಲಾಗಿದೆ. ಆಕೆಯ ಪತಿ ಪತಿ ಮುಧೀರಾಂ (55) ಎಂಬಾತನನ್ನು ಕೊಂದು ಆತನ ರುಂಡವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಪೊಲೀಸ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿದ್ದಾಳೆ.
''ಆತ ಕಳೆದ ಹಲವಾರು ವರ್ಷಗಳಿಂದ ನನಗೆ ಹೊಡೆಯುತ್ತಿದ್ದ. ಹಲವು ಬಾರಿ ಕೊಡಲಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದ. ಆತನನ್ನು ಬಿಟ್ಟು ಹೋಗಲು ಹಲವು ಬಾರಿ ಯೋಚಿಸಿದ್ದರೂ ಮಕ್ಕಳನ್ನು ನೆನೆದು ಹಾಗೆ ಮಾಡಿರಲಿಲ್ಲ,. ಆದರೆ ಸಹಿಸಲಸಾಧ್ಯವಾದಾಗ ಹೀಗೆ ಮಾಡಿದೆ, ಇಲ್ಲದೇ ಹೋಗಿದ್ದರೆ ಆತ ನನ್ನನ್ನು ಸಾಯಿಸುತ್ತಿದ್ದ'' ಎಂದು ಆಕೆ ಹೇಳಿದ್ದಾಳೆ.
ಇಬ್ಬರು ಪುತ್ರರು ಹಾಗೂ ಮೂವರು ಪತ್ರಿಯರೂ ಸೇರಿದಂತೆ ಐದು ಮಕ್ಕಳ ತಾಯಿಯಾಗಿರುವ ಈಕೆ ತನ್ನ ಪತಿಯ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಸುಮಾರು 5 ಕಿಮೀ ದೂರದ ಪೊಲೀಸ್ ಠಾಣೆಯ ತನಕ ಪತಿಯ ರುಂಡದೊಂದಿಗೆ ನಡೆದೇ ಆಗಮಿಸಿದ್ದಳು.
ಆರೋಪಿ ಮಹಿಳೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.