ನವದೆಹಲಿ,ಮೇ 30 (Daijiworld News/MSP): ನರೇಂದ್ರ ಮೋದಿ ನೇತೃತ್ವದ ಎನ್ ಡಿಎ 2 ಸರ್ಕಾರ ಗುರುವಾರ ಅಸ್ಥಿತ್ವಕ್ಕೆ ಬರಲಿದೆ. ಇಂದು ಸಾಯಂಕಾಲ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ನರೇಂದ್ರ ಮೋದಿಯಾಗಿ ಸರ್ಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜ್ಯದ 25 ಮಂದಿ ಬಿಜೆಪಿ ಸಂಸದರ ಪೈಕಿ ಮಾಜಿ ಮುಖ್ಯಮಂತ್ರಿ , ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ಮತ್ತೆ ಸಚಿವ ಸ್ಥಾನ ಒಲಿದಿದೆ. ಹಿರಿತನದ ಆಧಾರ ಮತ್ತು ಲಿಂಗಾಯತ ಕೋಟಾದಡಿ ಬೆಳಗಾವಿ ಸಂಸದ ಸುರೇಶ್ ಅಂಗಡಿ ಅವರಿಗೆ ಈ ಬಾರಿ ಅದೃಷ್ಟ ಒಲಿದುಬಂದಿದ್ದು ಸಚಿವರಾಗುವ ಭಾಗ್ಯ ದೊರಕಿದೆ. ಹುಬ್ಬಳ್ಳಿ -ಧಾರಾವಾಡ ಕ್ಷೇತ್ರದ ಸಂಸದ, 4 ನೇ ಬಾರಿ ಸಂಸದರಾಗಿ ಆಯ್ಕೆಯಾಗಿರುವ 56 ರ ಹರೆಯದ ಪ್ರಹ್ಲಾದ್ ಜೋಷಿ ಅವರಿಗೂ ಸಚಿವ ಸ್ಥಾನ ಒಲಿದಿದೆ.
ಇವರೆಲ್ಲರಿಗೂ ಇಂದು ಸಂಜೆ 4.30ಕ್ಕೆ ದೆಹಲಿಯ ಪ್ರಧಾನಿ ನಿವಾಸಕ್ಕೆ ಆಗಮಿಸುವಂತೆ ಅಮಿತ್ ಶಾ ಅವರಿಂದ ಕರೆ ಬಂದಿದೆ. ಈ ಮೂವರಿಗೆ ಲಿಂಗಾಯತ, ಬ್ರಾಹ್ಮಣ ಹಾಗೂ ಒಕ್ಕಲಿಗ ಕೋಟಾದಲ್ಲಿ ಆದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಕಳೆದ ಬಾರಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರಿಗೆ ಈ ಬಾರಿ ಕೂಡ ರಾಜ್ಯದಿಂದಲೇ ಮಂತ್ರಿ ಸ್ಥಾನ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.