ನವದೆಹಲಿ,ಮೇ 30 (Daijiworld News/MSP): ಪುಲ್ವಾಮದಲ್ಲಿ ಫೆ.14 ರಂದು ಜೈಷ್ ಎ ಮಹಮ್ಮದ್ ಉಗ್ರ ಸಂಘಟನೆ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಕುಟುಂಬಕ್ಕೂ ಪ್ರಧಾನಿ ನರೇಂದ್ರ ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ರಾಷ್ಟ್ರಪತಿ ಭವನದ ಎದುರಿನ ಅಂಗಳದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ 2 ನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮೃತರಾದ ಯೋಧರ ಕುಟುಂಬಸ್ಥರು ಭಾಗಿಗಳಾಗಳಿದ್ದಾರೆ.
ಆಹ್ವಾನದ ಮೇರೆಗೆ ಕೆಲ ಯೋಧರ ಕುಟುಂಬಸ್ಥರು ರಾಷ್ಟ್ರ ರಾಜಧಾನಿಗೆ ಬಂದಿಳಿದಿದ್ದಾರೆ. ಪುಲ್ವಾಮ ಬಾಂಬ್ ದಾಳಿಯಲ್ಲಿ ಮೃತಪಟ್ಟ ಯೋಧ ಸುದೀಪ್ ಬಿಸ್ವಾಸ್ ಅವರ ತಾಯಿ ರಾಷ್ಟೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ , ಪ್ರಧಾನಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಬರುವಂತೆ ನಮಗೆ ಕರೆಯೋಲೆ ಬಂದಿದೆ. ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ನಾವು ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸೆಗೆ ಸಂಬಂಧಿತ ಘಟನೆಯಲ್ಲಿ ಮೃತರಾಗಿದ್ದ ಬಿಜೆಪಿ ಕಾರ್ಯಕರ್ತರ ಕುಟುಂಬಕ್ಕೂ ಆಹ್ವಾನ ನೀಡಲಾಗಿದ್ದು, ಅವರು ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದೆಹಲಿಗೆ ಆಗಮಿಸಿದ್ದಾರೆ. ಇವರೆಲ್ಲಾರಿಗೂ ವಿಶೇಷ ಆಹ್ವಾನಿತರ ಅಡಿಯಲ್ಲಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ