ಹೊಸದಿಲ್ಲಿ, ಮೇ30(Daijiworld News/SS): ಬಹುಮತದೊಂದಿಗೆ ಎರಡನೇ ಬಾರಿಗೆ ಅಧಿಕಾರಕ್ಕೇರಿರುವ ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದೆ.

ಎನ್ಡಿಎ ಸರಕಾರದ ಬಹುನಿರೀಕ್ಷೆಯ ದ್ವಿತೀಯ ಅವಧಿಗೆ ಚಾಲನೆ ದೊರೆಯಲಿದೆ. ರಾಷ್ಟ್ರಪತಿ ಭವನದ ಎದುರಿನ ಅಂಗಳದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬಿಜೆಪಿ ವರಿಷ್ಠ ನಾಯಕ ಎಲ್.ಕೆ. ಆಡ್ವಾಣಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ಮುರಳಿ ಮನೋಹರ್ ಜೋಶಿ, ಯೋಗಿ ಆದಿತ್ಯನಾಥ್, ಸುಷ್ಮಾ ಸ್ವರಾಜ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ, ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ರಾಮ್ಮಾಧವ್, ಸದ್ಬುರು ಜಗ್ಗಿ, ಉದ್ಯಮಿ ಮುಖೇಶ್ ಅಂಬಾನಿ, ನೀತು ಅಂಬಾನಿ, ಜೆಆರ್ಡಿ ಟಾಟಾ, ರಜನಿಕಾಂತ್, ಆಶಾಭೋಂಸ್ಲೆ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬ ಸದಸ್ಯರು ಕೂಡ ರಾಷ್ಟ್ರಪತಿ ಭವನದಲ್ಲಿ ಹಾಜರಿದ್ದಾರೆ.
ಮೋದಿ ಅವರೊಂದಿಗೆ ಬಿಜೆಪಿ ಮತ್ತು ಮಿತ್ರ ಕೂಟದ 60ಕ್ಕೂ ಅಧಿಕ ಸಚಿವರು ಪ್ರತಿಜ್ಞೆ ಸ್ವೀಕರಿಸಲಿದ್ದಾರೆ. ಬಿಮ್ಸ್ಟೆಕ್ ದೇಶಗಳ ಮುಖ್ಯಸ್ಥರು ಸೇರಿದಂತೆ ಹಲವು ವಿದೇಶಿ ಗಣ್ಯರು, ರಾಜ್ಯಗಳ ಸಿಎಂಗಳು, ರಾಜ್ಯಪಾಲರು, ಪ್ರತಿಪಕ್ಷ ಮುಖಂಡರು, ಮಾಜಿ ಪ್ರಧಾನಿಗಳು, ಮಾಜಿ ರಾಷ್ಟ್ರಪತಿಗಳು, 100 ಮಂದಿ ಅನಿವಾಸಿ ಭಾರತೀಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಒಟ್ಟು 6000ಕ್ಕೂ ಹೆಚ್ಚು ಗಣ್ಯರಿಗಾಗಿ ವ್ಯವಸ್ಥೆಗಳನ್ನು ಮಾಡಲಾಗಿದೆ.