ಬೆಂಗಳೂರು, ಮೇ30(Daijiworld News/SS): ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತಾ ಜನತರ ನೀಡಿರುವ ತೀರ್ಪನ್ನು ನಾವು ತಲೆಬಾಗಿ ಒಪ್ಪಿಕೊಂಡಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ದೇಶದ ಜನತೆ ನೀಡಿದ ತೀರ್ಪನ್ನು ನಾವು ತಲೆಬಾಗಿ ಒಪ್ಪಿಕೊಂಡಿದ್ದೇವೆ. ಆದರೆ ರಾಜ್ಯ ಬಿಜೆಪಿ ನಾಯಕರು ತಮಗೆ ಬಹುಮತವಿಲ್ಲದಿದ್ದರೂ ಸಮ್ಮಿಶ್ರ ಸರ್ಕಾರವನ್ನು ಬೀಳಿಸಿ ಅಧಿಕಾರದ ಗದ್ದುಗೆ ಏರುವ ಪ್ರಯತ್ನವನ್ನು ಮಾತ್ರ ಇಂದಿಗೂ ಕೈಬಿಟ್ಟಿಲ್ಲ. ಇದು ನಾಡಿನ ಜನಾದೇಶವನ್ನು ತಿರಸ್ಕರಿಸಿದಂತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ಇಂದಿನವರೆಗೂ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡದೇ ಕೇವಲ ಸರ್ಕಾರ ಬೀಳಿಸುವುದರಲ್ಲೇ ಮಗ್ನವಾಗಿದೆ. ಕಾಂಗ್ರೆಸ್ ಶಾಸಕರು ನಮ್ಮ ಜೊತೆಯಿದ್ದಾರೆ, ಕೆಲವು ಜೆಡಿಎಸ್ ಶಾಸಕರು ಬಿಜೆಪಿ ಸೇರುತ್ತಾರೆ, ನಾಳೆ ಸರ್ಕಾರ ಬೀಳಲಿದೆ, ತಿಂಗಳ ಅಂತ್ಯಕ್ಕೆ ಸರ್ಕಾರ ಬೀಳಲಿದೆ ಅಂತ ಬಿಜೆಪಿಯವರು ಹೇಳುತ್ತಲೇ ಬಂದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಶಾಸಕರಿಗೆ ಹಣದ ಆಮಿಷವೊಡ್ಡಿ, ಬೆದರಿಸಿ ಸರ್ಕಾರ ಸಮರ್ಪಕ ಆಡಳಿತ ನಡೆಸದಂತೆ ಅಸ್ಥಿರಗೊಳಿಸುವ ಪ್ರಯತ್ನ ನಡೆಸುವುದು ಸಂವಿಧಾನ ಬಾಹಿರವಲ್ಲವೇ...? ರಾಜ್ಯದ ಜನತೆ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆಂದು ಭಾವಿಸಿದ್ದೇನೆ. ಪ್ರಜಾಪ್ರಭುತ್ವ ವ್ಯವಸ್ಥೆ ಎಂದ ಮೇಲೆ ಪಕ್ಷದೊಳಗೆ ಸಣ್ಣ ಪುಟ್ಟ ಮನಸ್ತಾಪಗಳಿರುತ್ತವೆ. ಸರ್ಕಾರ ಬೀಳಿಸುವುದೊಂದೆ ಪರಿಹಾರವಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಈ ಹಿಂದೆಯೇ ಬಹುಮತ ಸಾಬೀತುಪಡಿಸಲು ಅವಕಾಶ ನೀಡಲಾಗಿತ್ತು. ಆದರೆ ಬಹುಮತ ಸಾಬೀತು ಮಾಡಲಾಗದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರದಲ್ಲಿ ಜನಾದೇಶವನ್ನು ಗೌರವಿಸಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕೆಲಸ ಮಾಡುವುದು ಬಿಟ್ಟು ಕುದುರೆ ವ್ಯಾಪಾರಕ್ಕೆ ನಿಂತಿದ್ದಾರೆ ಎಂದು ಹೇಳಿದರು.