ನವದೆಹಲಿ, ಸೆ.23(DaijiworldNews/AA): ತಿರುಪತಿ ಲಡ್ಡು ವಿವಾದದ ವಿಚಾರವಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಲಡ್ಡು ತಯಾರಿಕೆಗೆ ತುಪ್ಪ ಪೂರೈಸುತ್ತಿದ್ದ ಎಆರ್ ಡೈರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ರವಾನಿಸಿದ ವರದಿಯ ಆಧಾರದ ಮೇಲೆ ಎಆರ್ ಡೈರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಡೈರಿ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಪ್ರಯೋಗಾಲಯ ಒಂದರಲ್ಲಿ ತುಪ್ಪದ ಮಾದರಿ ಪರೀಕ್ಷಿಸಲಾಗಿತ್ತು. ಈ ವೇಳೆ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸುವ ತುಪ್ಪದ ಮಾದರಿಗಳಲ್ಲಿ ತಾಳೆ ಎಣ್ಣೆ, ಮೀನಿನ ಎಣ್ಣೆ, ಬೀಫ್ ಟ್ಯಾಲೋ, ಹಂದಿ ಕೊಬ್ಬು ಒಳಗೊಂಡಿದೆ ಎಂದು ವರದಿ ನೀಡಿತ್ತು.
ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಕಲಬೆರಕೆ ತುಪ್ಪವನ್ನು ಸರಬರಾಜು ಮಾಡಿದ ಆರೋಪದ ಮೇಲೆ ದೇವಾಲಯದ ಮಂಡಳಿಯು ಎಆರ್ ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್ನ್ನು ಕಪ್ಪು ಪಟ್ಟಿಗೆ ಸೇರಿಸಿದೆ. ಕಂಪನಿಯ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಘೋಷಣೆ ಮಾಡಿದ್ದಾರೆ.