ಬೆಂಗಳೂರು, ಸೆ.25(DaijiworldNews/AA): ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೇಳುವ ವಿಪಕ್ಷಗಳ ನಾಯಕರಿಗೆ ನೈತಿಕತೆ ಇದೆಯಾ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ-ಜೆಡಿಎಸ್ ನಾಯಕರನ್ನು ಪಶ್ನಿಸಿದ್ದಾರೆ.
ಸಿಎಂ ಸಲ್ಲಿಸಿದ್ದ ರಿಟ್ ಅರ್ಜಿ ವಜಾಗೊಳಿಸಿ ಹೈಕೋರ್ಟ್ ನೀಡುರುವ ಆದೇಶದ ಹಿನ್ನೆಲೆ ಇಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಸಿಎಂ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಇದು ರಾಜಕೀಯ ಪಿತೂರಿ. ಹೈಕೋರ್ಟ್ನಿಂದ ತೀರ್ಪು ಬಂದಿದೆ. ನಮಗೆ ಮುಂದೆ ಅನೇಕ ಆಯ್ಕೆಗಳು ಇವೆ. ನಾವು ಕಾನೂನು ಹೋರಾಟ ಮಾಡುತ್ತೇವೆ. ನಾವೆಲ್ಲ ಸಿಎಂ ಜೊತೆ ಇದ್ದೇವೆ ಎಂದರು.
ಸಿಎಂ ರಾಜೀನಾಮೆಗೆ ವಿಪಕ್ಷಗಳ ಒತ್ತಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಪಕ್ಷಗಳಿಗೆ ಹೇಳಿ ಸಮ್ಮಿಶ್ರ ಸರ್ಕಾರದಲ್ಲಿ ಎಷ್ಟು ಜನರ ಮೇಲೆ ಕೇಸ್ ಇದೆ. ಎಫ್ಐಆರ್ ದಾಖಲು ಆಗಿದೆ. ಎಷ್ಟು ಜನ ಬೇಲ್ ಮೇಲೆ ಇದ್ದಾರೆ. ಮೊದಲು ಅವರ ಬಳಿ ರಾಜೀನಾಮೆ ಪಡೆಯಲಿ. ಆಮೇಲೆ ಸಿಎಂ ಅವರ ರಾಜೀನಾಮೆ ಕೇಳಲಿ ಎಂದು ಕಿಡಿ ಕಾಡಿದರು.
ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಅವರು ಕೂಡಾ ಬೇಲ್ ಮೇಲೆ ಇದ್ದಾರೆ ಅನ್ನೋ ಪ್ರಶ್ನೆ ಅಲ್ಲ. ಬಿಜೆಪಿಯೇತರ ಸರ್ಕಾರ ಅಸ್ಥಿರ ಮಾಡಲು ಇಂತಹ ಅಸ್ತ್ರಗಳನ್ನ ಅವರು ಬಿಡುತ್ತಿದ್ದಾರೆ. ದೇಶದ ದುರಂತ ಅಂದರೆ ಪ್ರಜಾಪ್ರಭುತ್ವದ ಅಸ್ತಿತ್ವ ಅಲುಗಾಡುತ್ತಿದೆ. ಚುನಾಯಿತ ಪ್ರತಿನಿಧಿಗಳನ್ನ ಈ ರೀತಿ ಸೇಡಿನ ರಾಜಕೀಯ ಮಾಡಿ ಸರ್ಕಾರವನ್ನ ಅಸ್ಥಿರ ಮಾಡೋ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಜನ ಕಾಂಗ್ರೆಸ್ಗೆ ಆಶೀರ್ವದಿಸಿದ್ದಾರೆ. ಇದು ಬಿಜೆಪಿ-ಜೆಡಿಎಸ್ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅದರಿಂದ ಈ ರೀತಿಯ ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.