ನವದೆಹಲಿ, ಮೇ31(Daijiworld News/SS): ನರೇಂದ್ರ ಮೋದಿಯವರು ಪ್ರಧಾನಿ ಗದ್ದುಗೆ ಏರಿದ ಮರುದಿನವೇ ದೇಶದ ರೈತರು, ಬಡವರು, ಸಣ್ಣ ವ್ಯಾಪಾರಿಗಳು, ಹುತಾತ್ಮ ಯೋಧರ ಕುಟುಂಬಗಳಿಗೆ ಭರ್ಜರಿ ಉಡುಗೊರೆ ನೀಡಿದ್ದು, ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಐತಿಹಾಸಿಕ ಹೆಜ್ಜೆ ಇಟ್ಟಿದ್ದಾರೆ.
ಪ್ರಧಾನ ಮಂತ್ರಿ ಸ್ಕಾಲರ್ಶಿಪ್ ಯೋಜನೆಯಲ್ಲಿ ಮಹತ್ವದ ಬದಲಾವಣೆಯನ್ನು ಮೋದಿ ಘೋಷಿಸಿದ್ದಾರೆ. ರಾಷ್ಟ್ರೀಯ ರಕ್ಷಣಾ ನಿಧಿ ಅಡಿಯಲ್ಲಿ ವಿದ್ಯಾರ್ಥಿವೇತನ ಯೋಜನೆಯಲ್ಲಿ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ವಿದ್ಯಾರ್ಥಿವೇತನ ಹೆಚ್ಚಳ ಮಾಡಿ ಆದೇಶ ನೀಡಲಾಗಿದೆ.
ರಾಷ್ಟ್ರೀಯ ರಕ್ಷಣಾ ನಿಧಿಯಿಂದ ಪ್ರಧಾನ ಮಂತ್ರಿ ಸ್ಕಾಲರ್ಶಿಪ್ ಯೋಜನೆಯಡಿಯಲ್ಲಿ ಸೇನೆ, ಅರೆಸೇನಾ ಪಡೆ ಮತ್ತು ರೈಲ್ವೆ ರಕ್ಷಣಾ ದಳ ಹುತಾತ್ಮ ಯೋಧರ ಅಥವಾ ನಿವೃತ್ತ ಯೋಧರ ಮಕ್ಕಳು ಮತ್ತು ವಿಧವೆಯರ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಪ್ರಧಾನಿ ಮೋದಿ ಅವರು ಇಂದು ಹೊರಡಿಸಿರುವ ಆದೇಶದಂತೆ, ಬಾಲಕರಿಗೆ ಪ್ರತಿ ತಿಂಗಳು ಸಿಗುತ್ತಿದ್ದ 2,000 ರೂ ಬದಲು 2,500 ರೂ.ಗಳಿಗೆ ಮತ್ತು ಬಾಲಕಿಯರಿಗೆ 2,250 ರೂ.ನಿಂದ 3,000 ರೂ ನೀಡಲಾಗುತ್ತದೆ.
ರಾಷ್ಟ್ರೀಯ ರಕ್ಷಣಾ ನಿಧಿ ಅಡಿಯಲ್ಲಿ ಬರುವ ವಿದ್ಯಾರ್ಥಿವೇತನದ ದರವನ್ನು ಹೆಚ್ಚಿಸಲು ಅವರು ಒಪ್ಪಿಗೆ ಸೂಚಿಸಿದ್ದಾರೆ. ಈ ಯೋಜನೆಯಲ್ಲಿ ರಾಜ್ಯ ಪೊಲೀಸ್ ಸಿಬ್ಬಂದಿ ಕೂಡ ಸೇರ್ಪಡೆಗೊಂಡಿದ್ದಾರೆ. ಗಂಡು ಮತ್ತು ಹೆಣ್ಣುಮಕ್ಕಳಿಗೆ ಪ್ರತ್ಯೇಕ ಈ ನಿರ್ಧಾರದ ಅನ್ವಯ ಸೇವೆಯಲ್ಲಿರುವಾಗಲೇ ಬಲಿಯಾಗುವ ಯೋಧರ ಮಕ್ಕಳಿಗೆ ನೀಡಲಾಗುವ ವಿದ್ಯಾರ್ಥಿ ವೇತನವನ್ನು ಏರಿಸಲಾಗಿದೆ.
ಇದರಲ್ಲಿ ಗಂಡುಮಕ್ಕಳಿಗೆ ಶೇ 25ರಷ್ಟು ಹೆಚ್ಚಳ ಮಾಡಿದ್ದರೆ, ಹೆಣ್ಣುಮಕ್ಕಳ ವಿದ್ಯಾರ್ಥಿ ವೇತನವನ್ನು ಶೇ 33ರಷ್ಟು ಹೆಚ್ಚಿಸಲಾಗಿದೆ. ರಾಜ್ಯ ಪೊಲೀಸರ ಕುಟುಂಬಕ್ಕೂ ವಿಸ್ತರಣೆ ಈ ಮಹತ್ವದ ಸ್ಕಾಲರ್ಷಿಪ್ ಯೋಜನೆಯನ್ನು ಭಯೋತ್ಪಾದಕರು ಅಥವಾ ನಕ್ಸಲ್ ದಾಳಿಗಳಲ್ಲಿ ಹುತಾತ್ಮರಾಗುವ ರಾಜ್ಯ ಪೊಲೀಸ್ ಅಧಿಕಾರಿಗಳ ಮಕ್ಕಳಿಗೂ ವಿಸ್ತರಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ಮಾತ್ರವಲ್ಲ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಭೂಮಿಯ ಮಿತಿಯನ್ನು ಪರಿಗಣಿಸದೆ ಎಲ್ಲ ರೈತರಿಗೂ ವಿಸ್ತರಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ರೈತರಿಗಾಗಿ ಪ್ರಧಾನ್ ಮಂತ್ರಿ ಕಿಸಾನ್ ಪೆನ್ಷನ್ ಯೋಜನೆಯನ್ನು ಘೋಷಣೆ ಮಾಡಿದ್ದು, ಇದರಿಂದ 60ವರ್ಷ ಮೇಲ್ಪಟ್ಟ ರೈತರಿಗಾಗಿ ಪ್ರತಿ ತಿಂಗಳು ಮೂರು ಸಾವಿರ ರೂ ಪಿಂಚಣಿ ದೊರೆಯಲಿದೆ.
ಪ್ರಧಾನ್ ಮಂತ್ರಿ ಕಿಸಾನ್ ಯೋಜನೆಯನ್ನು ಎಲ್ಲ ರೈತರಿಗೆ ವಿಸ್ತರಿಸಿದ್ದು ಇದರಿಂದ 14.5 ಕೋಟಿ ರೈತರಿಗೆ ಪ್ರಯೋಜನವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರಕ್ಕೆ ವಾರ್ಷಿಕವಾಗಿ 87 ಸಾವಿರ ಕೋಟಿ ರೂ ವೆಚ್ಚಮಾಡಲಿದೆ. ಬಡವರು, ರೈತರು, ಅಸಂಘಟಿಕ ಕಾರ್ಮಿಕರು, ಸಣ್ಣ ಕಿರಾಣಿ ಅಂಗಡಿಯವರಿಗೂ ಹೊಸ ಪಿಂಚಣಿ ಯೋಜನೆಯ ಸದುಪಯೋಗ ದೊರಕಲಿದೆ.
ಈ ಯೋಜನೆ ಸಂಪೂರ್ಣ ಐಚ್ಛಿಕವಾಗಿದ್ದು, ದೇಶದ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ ನೀಡುವ ಯೋಜನೆ ಇದಾಗಿದೆ. ಈ ವರ್ಗದ 18ರಿಂದ 40 ವರ್ಷದೊಳಗಿನ ಯಾವುದೇ ರೈತರು ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದ್ದು, ದೇಣಿಗೆ ಸಲ್ಲಿಸಬಹುದಾಗಿದೆ. ಆ ಮೂಲಕ 60 ವರ್ಷ ವಯಸ್ಸಿನ ಬಳಿಕ ಮಾಸಿಕ ಕನಿಷ್ಠ 3,000 ರೂ.ಗಳ ಪಿಂಚಣಿ ಪಡೆಯಲಿದ್ದಾರೆ.
ಅರ್ಹ ರೈತರು ನೀಡುವಷ್ಟೇ ಪ್ರಮಾಣದ ದೇಣಿಗೆಯನ್ನು ಕೇಂದ್ರ ಸರಕಾರವೂ ಈ ಪಿಂಚಣಿ ನಿಧಿಗೆ ನೀಡಲಿದೆ. ಪಿಂಚಣಿ ಪಡೆಯುತ್ತಿದ್ದ ಚಂದಾದಾರರ ಮರಣದ ಬಳಿಕ ಆ ಫಲಾನುಭವಿಯ ಪತ್ನಿ/ಪತಿಗೆ ಆ ಮೊತ್ತದ ಅರ್ಧದಷ್ಟು ಪಿಂಚಣಿ ದೊರೆಯುತ್ತದೆ.