ನವದೆಹಲಿ, ಮೇ31(Daijiworld News/SS): ಪ್ರಧಾನಿ ಪಟ್ಟಕ್ಕೇರಿದ ನಂತರ ನರೇಂದ್ರ ಮೋದಿ ಮಾಲ್ದಿವ್ಸ್ಗೆ ಮೊದಲ ವಿದೇಶ ಪ್ರವಾಸ ಕೈಗೊಳ್ಳುವುದು ಖಚಿತಗೊಂಡಿದೆ.
ಜೂನ್ 7 ಮತ್ತು 8ನೇ ತಾರೀಖಿನಂದು ಮೋದಿ ಅವರು ಶ್ರೀಲಂಕಾ ಮತ್ತು ಮಾಲ್ಡಿವ್ಸ್ಗೆ ಪ್ರವಾಸ ಹೊರಟಿದ್ದು, ಮೊದಲಿಗೆ ಮಾಲ್ಡಿವ್ಸ್ಗೆ ಭೇಟಿ ನೀಡಿ ಆ ನಂತರ ಶ್ರೀಲಂಕಾಕ್ಕೆ ಭೇಟಿ ನೀಡುತ್ತಿದ್ದಾರೆ.
ಮಾಲ್ದಿವ್ಸ್ಗೆ ಭೇಟಿ ನೀಡಲಿರುವ ಮೋದಿ, ಅಲ್ಲಿನ ಸಂಸತ್ ಸದಸ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಾಲ್ದಿವ್ಸ್ ಅಧ್ಯಕ್ಷರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಕಳೆದ ವರ್ಷ ನವೆಂಬರ್ತಿಂಗಳಿನಲ್ಲಿ ಮಾಲ್ದಿವ್ಸ್ಗೆ ಭೇಟಿ ನೀಡಿದ್ದ ಮೋದಿ, ಅಲ್ಲಿನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಮೋದಿ ಅವರ ಶ್ರೀಲಂಕಾ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಇತ್ತೀಚೆಗಷ್ಟೆ ಭಾರಿ ಭಯೋತ್ಪಾದಕ ದಾಳಿಗೆ ತುತ್ತಾಗಿರುವ ಶ್ರೀಲಂಕಾಕ್ಕೆ ದಾಳಿಯಾದ ಕೆಲವೇ ದಿನಗಳ ಅವಧಿಯಲ್ಲಿ ಮೋದಿ ಭೇಟಿ ನೀಡುತ್ತಿದ್ದಾರೆ. ಇದು ಆ ದೇಶದ ಸ್ಥೈರ್ಯ ಹೆಚ್ಚಿಸಿ ಶ್ರೀಲಂಕಾ ಮತ್ತು ಭಾರತದ ಬಾಂದವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಸಂಭವ ಇದೆ.
ಮೋದಿ 2014ರಲ್ಲಿ ಮೊದಲ ಬಾರಿ ಪ್ರಧಾನಿಯಾದ ಬಳಿಕ ಭೂತಾನ್ಗೆ ಮೊದಲ ಪ್ರವಾಸ ಕೈಗೊಂಡಿದ್ದರು.