ಬೆಂಗಳೂರು,ಸೆ.26(DaijiworldNews/AK): ವಿಧಾನಸಭೆ ವಿಸರ್ಜನೆ ಮಾಡಿ ತಮ್ಮ ಹಿಂದೆ ರಾಜ್ಯದ ಜನರಿದ್ದಾರೆ ಎಂದು ತೋರಿಸಿಕೊಟ್ಟರೆ ಬಿಜೆಪಿ ನಿಮ್ಮ ವಿರುದ್ಧ ಪ್ರತಿಭಟನೆಯನ್ನೇ ಮಾಡುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಸವಾಲು ಹಾಕಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಒತ್ತಾಯಿಸಿ ರಾಜ್ಯ ಬಿಜೆಪಿ ವತಿಯಿಂದ ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಇಂದು ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ್ ಅವರು, ಸಿದ್ದರಾಮ್ಯನವರೇ ನೀವು ವಿಧಾನಸಭೆ ವಿಸರ್ಜನೆಗೆ ಮುಂದಾದರೆ ಕಾಂಗ್ರೆಸ್ಸಿನ 136 ಶಾಸಕರ ಪೈಕಿ 135 ಜನ ಶಾಸಕರೂ ನಿಮ್ಮ ಜೊತೆ ಇರುವುದಿಲ್ಲ. ಜಮೀರ್, ಮಹದೇವಪ್ಪ, ಕಾಕಾ ಪಾಟೀಲ್ ಕೂಡ ಇರುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಅಭಿವೃದ್ಧಿ ಕನಸಿನ ಮಾತಾಗಿದೆ. ಲೂಟಿ, ಭ್ರಷ್ಟಾಚಾರ ಮಿತಿ ಮೀರಿದೆ. ಈ ಸರಕಾರಕ್ಕೆ ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ಮಾಡಲು ಅಧಿಕಾರ, ಯೋಗ್ಯತೆ ಇಲ್ಲ ಎಂದ ಅವರು, ರಾಜೀನಾಮೆ ಕೊಡುವುದೊಂದೇ ನಿಮ್ಮ ಮುಂದಿನ ದಾರಿ ಎಂದು ಸಲಹೆ ನೀಡಿದರು.
ಇವತ್ತು ಎಫ್ಐಆರ್ ಕೂಡ ಆಗಲಿದೆ. ಇನ್ಯಾತಕ್ಕೆ ಕಾಯುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಹೈಕೋರ್ಟ್ ಆದೇಶ ಬಂದಿದೆ. ಜನಪ್ರತಿನಿಧಿಗಳ ಕೋರ್ಟಿನ ಆದೇಶವೂ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ರಾಜೀನಾಮೆ ಬಿಟ್ಟು ಬೇರೇನು ಮಾಡಲೂ ಸಾಧ್ಯವಿಲ್ಲ ಎಂದು ವಿಶ್ಲೇಷಿಸಿದರು.
ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದು ತನಿಖೆ ಮೇಲೆ ಪ್ರಭಾವ ಬೀರುತ್ತಾರೆಂದು ಹೇಳಿದ್ದಿರಲ್ಲವೇ? ಎಂದು ಕೇಳಿದರು. ನಿಷ್ಪಕ್ಷಪಾತ ತನಿಖೆ ಆಗಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯನವರು ಹೇಳಿದ್ದರು. ಇದು ಕೂಡ ಭ್ರಷ್ಟಾಚಾರದ ಕೇಸ್ ಎಂದು ಗಮನ ಸೆಳೆದರು.