ಬೆಂಗಳೂರು, ಮೇ31(Daijiworld News/SS): ನಾವು ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ಮಾಡದೇ ಅದು ತಾನಾಗಿಯೇ ಅಸ್ಥಿರಗೊಳ್ಳುವವರೆಗೂ ಕಾಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲಕ್ಕೆ ಬಿಜೆಪಿ ವರಿಷ್ಠರು ಸದ್ಯಕ್ಕೆ ಬ್ರೇಕ್ ಹಾಕುವಂತೆ ಸೂಚಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ನ ಒಂದಿಬ್ಬರು ಶಾಸಕರನ್ನು ಮುಂದೆಬಿಟ್ಟು ಸರ್ಕಾರದಲ್ಲಿ ಅತೃಪ್ತಿಯ ನಾಟಕವಾಡಿಸುತ್ತಿರುವುದು ಬಿಜೆಪಿ ಹೈಕಮಾಂಡ್ಗೆ ಗಮನಕ್ಕೆ ಬಂದಿದೆ. ಹೀಗಾಗಿ ರಾಜ್ಯ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡದಂತೆ ಪಕ್ಷದ ವರಿಷ್ಠರು ನಿರ್ದೇಶನ ಕೊಟ್ಟಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಪಕ್ಷದ ನಾಯಕರು ಒಟ್ಟಾಗಿ ರಾಜ್ಯದ ಅಭಿವೃದ್ಧಿಯತ್ತ ಗಮನ ಕೊಡಲಿ. ನಾವು ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ಮಾಡದೇ ಅದು ತಾನಾಗಿಯೇ ಅಸ್ಥಿರಗೊಳ್ಳುವವರೆಗೂ ಕಾಯುತ್ತೇವೆ ಎಂದು ಹೇಳಿದರು.
ಈ ಬಾರಿ ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯಕ್ಕೆ 4ಸ್ಥಾನ ನೀಡಿ ಉತ್ತಮ ಖಾತೆಗಳನ್ನೂ ನೀಡಿರುವುದು ತೃಪ್ತಿಯಾಗಿದೆ. ಜೂನ್ 5ರಂದು ಬೆಂಗಳೂರಿನಲ್ಲಿ ನೂತನ ಸಂಸದರಿಗೆ ಅಭಿನಂದನಾ ಸಭೆ ಏರ್ಪಡಿಸಲಾಗಿದ್ದು, ಸಭೆಯಲ್ಲಿ ಶಾಸಕರು, ಸಂಸದರು ಹಾಗೂ ಪಕ್ಷದ ಪ್ರಮುಖರೊಂದಿಗೆ ಚರ್ಚಿಸಿ ರಾಜ್ಯ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳು ಮತ್ತು ವೈಫಲ್ಯಗಳ ವಿರುದ್ಧದ ಹೋರಾಟಕ್ಕೆ ರೂಪುರೇಷೆ ಸಿದ್ಧಗೊಳಿಸಲಾಗುವುದು ಎಂದು ಹೇಳಿದರು.
ಸ್ಥಳೀಯ ಸಂಸ್ಥೆಗಳ ಫಲಿತಾಂಶ ನಿರೀಕ್ಷಿತ. ಸಹಜವಾಗಿಯೇ ಮೈತ್ರಿ ನಾಯಕರು ಆಡಳಿತ ಯಂತ್ರದ ದುರುಪಯೋಗ ಮಾಡಿಕೊಂಡು ಒಂದಿಷ್ಟು ಹೆಚ್ಚು ಸ್ಥಾನಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿದರು.