ಕೋಲ್ಕತಾ, ಮೇ 31 (Daijiworld News/SM): ಇತ್ತೀಚೆಗೆ ಪ್ರಕಟಗೊಂಡ ಲೋಕಸಭೆ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ದೇಶದಲ್ಲೇ ಸುಂಟರಗಾಳಿ ಎಬ್ಬಿಸಿದೆ. ಈ ಸುಂಟರಗಾಳಿಗೆ ಸಿಲುಕಿ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ನ್ನು ಬುಡ ಸಮೆತ ಕಿತ್ತೆಸೆದಿದೆ. ಇದರ ಎಪೆಕ್ಟ್ ಪಶ್ಚಿಮ ಬಂಗಾಳಕ್ಕೂ ಒಂದಿಷ್ಟು ತಟ್ಟಿದ್ದು, ಮೋದಿ ತನ್ನ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಆದರೆ, ಇದಕ್ಕೆ ಜಗ್ಗದ ದಿಟ್ಟ ಮಹಿಳೆ ಸಿಎಂ ಮಮತಾ ಬ್ಯಾನರ್ಜಿ ಬಿಜೆಪಿಯ ವಿರುದ್ಧ ಮತ್ತೆ ಗುಡುಗಿದ್ದಾರೆ.
ಬಿಜೆಪಿಯನ್ನು ನಾನು ಎಂದೆಂದಿಗೂ ದ್ವೇಷಿಸುತ್ತೇನೆ. ಬಿಜೆಪಿ ವಿರುದ್ಧ ಸೇಡು ತೀರಿಸಿಕೊಂಡೇ ಸಿದ್ಧ ಎಂದು ಸಿಎಂ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಿಂಸಾಕೃತ್ಯ ನಡೆಸಿದೆ ಎಂದು ಆರೋಪಿಸಿರುವ ಅವರು, ನೈಹಾತಿಯಲ್ಲಿ ನಡೆದ ಗಲಭೆಯಲ್ಲಿ ಟಿಎಂಸಿ ಕಾರ್ಯಕರ್ತರು ನಿರಾಶ್ರಿತರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಧರಣಿಯಲ್ಲಿ ಸ್ವತಃ ಭಾಗವಹಿಸಿದ ಸಿಎಂ ಮಮತಾ ಭಾವನಾತ್ಮಕವಾಗಿ ಭಾಷಣ ಮಾಡಿದ್ದಾರೆ.
ನಾನು ಬಿಜೆಪಿಯನ್ನು ದ್ವೇಷಿಸುತ್ತೇನೆ. ಬಂಗಾಳದ ಸಂಸ್ಕೃತಿಯನ್ನು ಗೌರವಿಸುತ್ತೇನೆ. ನೀತಿ ಸಂಹಿತೆಯ ಅನುಕೂಲವನ್ನು ಕೆಲವು ಗೂಂಡಾಗಳು ಪಡೆದುಕೊಂಡಿದ್ದಾರೆ. ನಾನು ಅವರನ್ನು ಬಿಡುವುದಿಲ್ಲ, ನಾನು ಮೋದಿ ಅಥವಾ ಕೇಂದ್ರ ಸರ್ಕಾರದ ನೆರಳಿನಲ್ಲಿ ಬದುಕುವುದಿಲ್ಲ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.