ಜಮ್ಮು, ಸೆ.27(DaijiworldNews/AA): ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆಯನ್ನು ರದ್ದುಪಡಿಸುವುದರೊಂದಿಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಜಾರಿ ಮಾಡಲಾಗುತ್ತದೆ ಎಂದು ರಾಜ್ಯಸಭೆ ಸಂಸದ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸೈಯದ್ ನಾಸಿರ್ ಹುಸೇನ್ ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆ ಹಿನ್ನೆಲೆ ಜಮ್ಮುವಿನಲ್ಲಿ ಮಾತನಾಡಿದ ಅವರು, ಅಗ್ನಿವೀರ್ ಯೋಜನೆ ಅನುಷ್ಠಾನದಿಂದ ಅನೇಕ ರಾಜ್ಯಗಳ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಮತ್ತು ಲಡಾಖ್ನಂತಹ ಗುಡ್ಡಗಾಡು ಪ್ರದೇಶದ ಯುವಕರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನಾಲ್ಕು ವರ್ಷಗಳ ಸೈನಿಕ ಸೇವೆಯ ನಂತರ ಯುವಕರು ಮತ್ತೆ ನಿರುದ್ಯೋಗಿಗಳಾಗಲಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಈ ಯೋಜನೆಯನ್ನು ಪರಿಚಯಿಸುವ ಮೂಲಕ ದೇಶದ ಭದ್ರತೆ, ಸಂರಕ್ಷಣೆಯೊಂದಿಗೆ ರಾಜಿ ಮಾಡಿಕೊಂಡಿದೆ. ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ಯೋಜನೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೂಡ ಘೋಷಣೆ ಮಾಡಿದ್ದಾರೆ. ಈ ಯುವ ವಿರೋಧಿ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಕಾಂಗ್ರೆಸ್ ದೇಶದ ಯುವಕರಿಗೆ ದೊಡ್ಡ ಪರಿಹಾರವನ್ನು ನೀಡುತ್ತದೆ ಎಂದರು.