ಬೆಂಗಳೂರು, ಸೆ.27(DaijiworldNews/AK):ರಾಜ್ಯ ಸರಕಾರಕ್ಕೆ ತಾವು ನೇಮಿಸಿದ ಮುಖ್ಯ ಕಾರ್ಯದರ್ಶಿ (ಸಿಎಸ್) ಮೇಲೆ ಅನುಮಾನವಿದೆ; ಅವರನ್ನು ನಂಬುತ್ತಿಲ್ಲ. ನಿಮ್ಮ ಡಿಜಿಪಿ ಮೇಲೆಯೂ ನಿಮಗೆ ನಂಬಿಕೆ ಇಲ್ಲ ಎಂದು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ್ ಅವರು ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರಿಗೆ ಚೀಫ್ ಸೆಕ್ರೆಟರಿಯೂ ಉತ್ತರ ಕೊಡುವಂತಿಲ್ಲ; ಕ್ಯಾಬಿನೆಟ್ ಮೂಲಕ ಹೋಗಬೇಕು ಎಂದು ನಿರ್ಧರಿಸಿದ್ದಾರೆ. ರಾಜ್ಯಪಾಲರಿಗೇ ಮಾಹಿತಿ ಕೊಡುವುದಿಲ್ಲ ಎಂದರೆ, ಕಾಂಗ್ರೆಸ್ ಪ್ರಜಾಪ್ರಭುತ್ವ ಇದೇನಾ? ಎಂದು ಕೇಳಿದರು.
ಯಾಕೆ ಈ ಭಯ, ಆತಂಕ? ಯಾಕೆ ಈ ತಡೆಗೋಡೆ ಮಾಡುತ್ತಿದ್ದೀರಿ? ಎಂದು ಪ್ರಶ್ನೆಯನ್ನು ಮುಂದಿಟ್ಟರು. ಸಿದ್ದರಾಮಯ್ಯನವರು ತಮ್ಮ ಹಿರಿತನ, ಅನುಭವಕ್ಕೆ ಅವರೇ ಮಸಿ ಬಳಿದುಕೊಂಡಿದ್ದಾರೆ. ಮಸಿ ಬಳಿದುಕೊಂಡು ಮಸಿ ಇಲ್ಲ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರಕಾರದ ಅಧಿಕಾರಿಗಳ, ನೌಕರರ ವಿರುದ್ಧ ತನಿಖೆ ಮಾಡಲು ಸಿಬಿಐಗೆ ಮುಕ್ತ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಈ ಸಂಬಂಧ ರಾಜ್ಯ ಸರಕಾರವೂ ಅನುಮತಿ ಕೊಟ್ಟಿದ್ದು, ಇದನ್ನೂ ಹಿಂಪಡೆಯುವುದಾಗಿ ಹೇಳಿದ್ದಾರೆ. ಏನೇನು ಗೋಲ್ಮಾಲ್ ಮಾಡಿದ್ದೀರಿ? ಇಷ್ಟು ಆತಂಕ, ಭಯವೇಕೆ ಎಂದು ಕೇಳಿದರು.
ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ತಮ್ಮ ಕುತ್ತಿಗೆಗೆ ಬರುವ ಭಯದಲ್ಲಿ ಹೀಗೆ ಮಾಡುತ್ತಿದ್ದಾರೆ. ಮುಡಾದಲ್ಲಿ ಸಿಬಿಐ ತನಿಖೆ ಆದರೆ ತಮಗೆ ಕಷ್ಟವೆಂದು ಗಮನದಲ್ಲಿ ಇಟ್ಟುಕೊಂಡು ಇದನ್ನು ತಡೆಯಲು ಮುಂದಾದಂತಿದೆ ಎಂದು ಅವರು ಆರೋಪಿಸಿದರು.