ಬೆಂಗಳೂರು,ಜೂ01(DaijiworldNews/AZM):ದೇಶದಲ್ಲಿ ಪ್ರತಿ ವರ್ಷ ಸುಮಾರು 70 ಲಕ್ಷದಷ್ಟು ಜನರು ನೇರವಾಗಿ ತಂಬಾಕು ಸೇವನೆಯಿಂದ ಸಮಸ್ಯೆಗೆ ಒಳಗುತ್ತಿದ್ದು, ಪ್ರತಿಯೊಂದು ಸಿಗರೇಟಿನಲ್ಲೂ ಸುಮಾರು ೪೮೦೦ಕ್ಕೂ ಹೆಚ್ಚಿನ ರಾಸಾಯನಿಕ ಅಂಶಗಳಿವೆ ಎಂದು ಕೆಎಸ್ಆರ್ಟಿಸಿ ನಿರ್ದೇಶಕ ಡಾ.ಪಿ.ಎಸ್.ಹರ್ಷ ಹೇಳಿದ್ದಾರೆ.
ವಿಶ್ವ ತಂಬಾಕು ಮುಕ್ತ ದಿನಾಚರಣೆ ಅಂಗವಾಗಿ ಕೆಎಸ್ಆರ್ಟಿಸಿ ವತಿಯಿಂದ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ 'ತಂಬಾಕನ್ನು ದೂರವಿಡಿ-ನಿಮ್ಮ ಉಸಿರು ಕಾಪಾಡಿ' ಜಾಗೃತಿ ಕಾರ್ಯಕ್ರಮಕ್ಕೆ ತಂಬಾಕು ಉತ್ಪನ್ನಗಳ ಮೇಲೆ ನೀರು ಸುರಿಯುವ ಮೂಲಕ ಚಾಲನೆ ನೀಡಿ ಅವರು ಈ ಕುರಿತು ಮಾತನಾಡಿದರು.ಕೆಎಸ್ಆರ್ಟಿಸಿಯು ಬಸ್ನಿಲ್ದಾಣಗಳಲ್ಲಿ ಧೂಮಪಾನ ನಿಷೇಧ, ತಂಬಾಕು ಉತ್ಪನ್ನಗಳ ಮಾರಾಟ ನಿಷೇಧ, ತಂಬಾಕು ಉತ್ಪನ್ನಗಳ ಕುರಿತ ಜಾಹೀರಾತು ನಿಷೇಧ ಸೇರಿದಂತೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದೆ ಎಂದರು
ಕಳೆದ ಆರು ವರ್ಷಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಧೂಮಪಾನ ಸೇವನೆ ಪ್ರಕರಣಗಳಲ್ಲಿ ಸುಮಾರು 1.31 ಲಕ್ಷ ಜನರಿಂದ ಒಟ್ಟು 2.62 ಕೋಟಿ ರು. ದಂಡ ವಸೂಲಿ ಮಾಡಿದೆ ಎಂದು ಅವರು ತಿಳಿಸಿದರು.
ಕೇವಲ ದಂಡ ವಿಧಿಸುವುದರಿಂದ ತಂಬಾಕು ಸೇವನೆ ತಡೆಯಲು ಸಾಧ್ಯವಿಲ್ಲ. ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಸಾರ್ವಜನಿಕರಿಗೆ ಮನಮುಟ್ಟಿಜಾಗರೂಕರನ್ನಾಗಿಸುವ ಕೆಲಸಗಳಾಗಬೇಕಾಗಿದೆ ಎಂದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಜನರ ಆರೋಗ್ಯದ ಮೇಲೆ ಯುದ್ಧದಿಂದಾಗುವಷ್ಟೇ ದೊಡ್ಡ ಪರಿಣಾಮ ಪರೋಕ್ಷವಾಗಿ ಉಂಟಾಗುತ್ತಿದೆ ಎಂದು ಹೇಳಿದರು.