ನವದೆಹಲಿ,ಜೂ01(DaijiworldNews/AZM):ಚುನಾವಣೆಗೂ ಮುನ್ನ ವಿಪಕ್ಷಗಳು ನಿರುದ್ಯೋಗದ ಬಗ್ಗೆ ಮಾಡುತ್ತಿರುವ ಆರೋಪಗಳು ಸತ್ಯ ಎಂದು ಸರಕಾರದ ಅಂಕಿ ಅಂಶಗಳ ವರದಿಯಲ್ಲೇ ಸ್ಪಷ್ಟವಾಗಿದ್ದು, ನಿರುದ್ಯೋಗ ಪ್ರಮಾಣವು ಕಳೆದ 45 ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ತಿಳಿದುಬಂದಿದೆ. ಸರ್ಕಾರದ ಅಂಕಿ ಅಂಶವೇ ಇದನ್ನು ಸ್ಪಷ್ಟಪಡಿಸಿದೆ.
2017-18ರ ಹಣಕಾಸು ವರ್ಷದಲ್ಲಿ ನಿರುದ್ಯೋಗ ದರವು ಶೇ. 6.1ಕ್ಕೆ ಏರಿದೆ ಎಂದು ಕೇಂದ್ರ ಅಂಕಿ-ಅಂಶ ಸಚಿವಾಲಯವು ಸ್ಪಷ್ಟಪಡಿಸಿದೆ. ಚುನಾವಣೆಗೂ ಮುನ್ನ ಜನವರಿಲ್ಲಿ ಪತ್ರಿಕೆಯೊಂದರಲ್ಲಿ ಸರ್ಕಾರದ ಅಂಕಿ-ಅಂಶವನ್ನೇ ಉಲ್ಲೇಖಿಸಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿರುವ ಬಗ್ಗೆ ವರದಿ ಪ್ರಕಟವಾಗಿತ್ತು.
ಇದೀಗ ಸರಕಾರವೇ ಅಧಿಕೃತವಾಗಿ ಈ ಅಂಕಿ-ಅಂಶವನ್ನು ಹೊರಗೆಡವಿದೆ. ಆದರೆ, ನಿರುದ್ಯೋಗ ಪ್ರಮಾಣ ಪತ್ತೆಗೆ ಸರಕಾರ ಹೊಸ ವಿಧಾನ ಮತ್ತು ಮಾನದಂಡ ರೂಪಿಸಿರುವುದರಿಂದ ಈ ಅಂಕಿ-ಅಂಶ ಬಂದಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ.