ಬೆಂಗಳೂರು, ಸೆ.28(DaijiworldNews/AA): ಅಧಿಕಾರ ದುರುಪಯೋಗ ಪಡಿಸಿಕೊಂಡು ಚುನಾವಣಾ ಬಾಂಡ್ ಪಡೆದ ಆರೋಪದ ಮೇಲೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಆದರ್ಶ್ ಐಯ್ಯರ್ ಅವರು, ನಿರ್ಮಲಾ ಸೀತಾರಾಮನ್ ಸೇರಿ ಹಲವರು ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂ. ಹಣ ಸುಲಿಗೆ ಮಾಡಿದ್ದಾರೆಂದು ಆರೋಪಿಸಿ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎಫ್ಐಆರ್ ದಾಖಲಿಸಲು ಆದೇಶ ಹೊರಡಿಸಿತ್ತು. ಈ ಆದೇಶದ ಬೆನ್ನಲ್ಲೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಒಟ್ಟು ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದರಲ್ಲಿ ನಿರ್ಮಲಾ ಸೀತಾರಾಮನ್ ಅವರು ಎ1 ಆರೋಪಿಯಾಗಿದ್ದು, ಇಡಿ ಅಧಿಕಾರಿಗಳು ಎ2, ಕೇಂದ್ರ ಬಿಜೆಪಿ ಪದಾಧಿಕಾರಿಗಳು ಎ3, ನಳಿನ್ ಕುಮಾರ್ ಕಟೀಲ್ ಎ4, ಬಿ.ವೈ.ವಿಜಯೇಂದ್ರ ಎ5, ರಾಜ್ಯ ಬಿಜೆಪಿ ಪದಾಧಿಕಾರಿಗಳು ಎ6 ಆರೋಪಿಗಳಾಗಿದ್ದಾರೆ. ಇನ್ನು ಐಪಿಸಿ ಸೆಕ್ಷನ್ ೩೮೪ (ಸುಲಿಗೆ), 120ಬಿ (ಅಪರಾಧಿಕ ಒಳಸಂಚು), 34 (ಸಮಾನ ಉದ್ದೇಶ) ಮೇಲೆ ಇವರೆಲ್ಲರ ವಿರುದ್ಧ ಪ್ರಕರಣ ದಾಖಲಾಗಿದೆ.