ಬೆಂಗಳೂರು,ಜೂ01(DaijiworldNews/AZM):ರಾಜ್ಯದಲ್ಲಿ ಸಕಾಲದಲ್ಲಿ ಮಳೆಯಾಗಿಲ್ಲ ಎಂಬ ಕಾರಣಕ್ಕೆ, ಧಾರ್ಮಿಕ ದತ್ತಿ ಇಲಾಖೆಯ ಪ್ರಮುಖ ದೇವಾಲಯಗಳಲ್ಲಿ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ನಡೆಸುವಂತೆ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಮುಜುರಾಯಿ ಇಲಾಖೆಯ ಅಧೀನ ಕಾರ್ಯದರ್ಶಿ ಎಂ ತಿಪ್ಪೀರಮ್ಮ, ರಾಜ್ಯದಲ್ಲಿ ಸಕಾರದಲ್ಲಿ ಮಳೆ ಬೆಳೆಯಾಗದೇ ಜನತೆ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ರಾಜ್ಯದಲ್ಲಿ ಸುವೃಷ್ಟಿವುಂಟಾಗಿ ಬೆಳೆಗಳು ಸಮೃದ್ಧಿಯಾಗಿ ಬರಲು, ರಾಜ್ಯ ಸುಭಿಕ್ಷವಾಗಿರಲು ರಾಜ್ಯದ ಮುಜರಾಯಿ ದೇವಾಲಯಗಳಲ್ಲಿ ಪ್ರಾರ್ಥನೆ ಹಾಗೂ ವಿಶೇಷ ಪೂಜೆಗಳನ್ನು ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ.
ಅದರಂತೆ, ಪ್ರಸಕ್ತ ಸಾಲಿನಲ್ಲಿ ರಾಜ್ಯವು ಎದುರಿಸುತ್ತಿರುವ ಬರಗಾಲದ ಸಂಕಷ್ಟದಿಂದ ಪಾರಾಗಲು ರಾಜ್ಯದ ಎಲ್ಲಾ ಮುಜುರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆಯನ್ನು ನಡೆಸುವುದು ಅತ್ಯಾವಶ್ಯಕವೆಂದು ಸರ್ಕಾರ ಮನಗಂಡಿರುತ್ತದೆ. ಅದುದ್ದರಿಂದ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆಗಳನ್ನು ನಡೆಸುವುದು ಅತ್ಯವಶ್ಯಕವಾಗಿರುತ್ತದೆ. ಈ ಹಿನ್ನಲೆಯಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಸೇರಿದ ಪ್ರಮುಖ ದೇವಾಲಯಗಳಲ್ಲಿ ಪರ್ಜನ್ಯ ಜಪ ಮತ್ತು ವಿಶೇಷ ಪೂಜೆ ನಡೆಸಲು ಆದೇಶಿಸಿದೆ ಎಂದು ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ಈ ಪರ್ಜನ್ಯ ಜಪ, ವಿಶೇಷ ಪೂಜೆ, ಅಭಿಷೇಕವನ್ನು ದಿನಾಕ.6-6-2019ರ ಬ್ರಾಹ್ಮೀ ಮೂಹೂರ್ತದಲ್ಲಿ ಪ್ರಾರಂಭಿಸಿ, ಸಲ್ಲಿಸಲು ಸೂಚಿಸಿರುವ ಮುಜರಾಯಿ ಇಲಾಖೆ, ಇದಕ್ಕಾಗಿ 10 ಸಾವಿರ ರೂಪಾಯಿಗಳ ಖರ್ಚು ಮೀರದಂತೆ ಮಾಡಬೇಕು. ಈ ಖರ್ಚಿನ ಹಣವನ್ನು ಆಯಾ ದೇವಾಲಯದ ನಿಧಿಯಿಂದ ಭರಿಸಲು ಅನುಮತಿ ನೀಡಿದೆ.
ಹಾಗಾದರೇ ಮೌಢ್ಯ ನಿಷೇಧ ಕಾಯ್ದೆಯ ನಿಯಮವನ್ನು ರಾಜ್ಯ ಸರ್ಕಾರವೇ ಉಲ್ಲಂಘನೆ ಮಾಡುತ್ತಿದ್ಯಾ ಎಂಬ ಅನುಮಾನಕ್ಕೆ, ಮುಜರಾಯಿ ಇಲಾಖೆ ಹೊರಡಿಸಿರುವ ಆದೇಶದಿಂದ ತಿಳಿದು ಬರುತ್ತಿದೆ. ಮಳೆ ಪ್ರಕೃತಿ ದತ್ತವಾಗಿ ಬರುವ, ನಡೆಸುವ ಕ್ರಿಯೆ. ಇದನ್ನು ಜಪ, ತಪಗಳಿಂದ ಬರಿಸಲು ಸಾಧ್ಯವಿದ್ಯಾ ಎಂಬುದು ಪ್ರಗತಿಪರ ಚಿಂತಕರ ವಾದ.