ನವದೆಹಲಿ,ಜೂ 01 (Daijiworld News/MSP): ಈ ಬಾರಿ ಕೇರಳ ಮತ್ತು ಕರ್ನಾಟಕಕ್ಕೆ, ಒಂದೇ ದಿನದಂದು ಅಂದರೆ ಜೂ. 6ರಂದು ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಆದರೆ ಈ ಬಾರಿ ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಂಭವ ಇದೆ ಎಂದು ಇಲಾಖೆ ಶುಕ್ರವಾರ ಹೇಳಿದೆ.
ಇಲಾಖೆ ಈ ಹಿಂದೆ ತಿಳಿಸಿರುವಂತೆ ಜೂ.6ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ದ.ಭಾರತದಲ್ಲಿ ಶೇ.97ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಜೂನ್ ಆರಂಭದಿಂದ ಸೆಪ್ಟಂಬರ್ ಅಂತ್ಯದವರೆಗೆ ನೈಋತ್ಯ ಮುಂಗಾರು ಮಳೆಯಾಗಲಿದ್ದು, ದಕ್ಷಿಣ ಭಾರತದಲ್ಲಿ ಶೇ.8ರಷ್ಟು ಹೆಚ್ಚು ಕಡಿಮೆಯಾಗಬಹುದು ಎಂದು ಶುಕ್ರವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ಮುಂಗಾರು ಮಳೆಯ ಮೇಲೆ ಎಲ್ ನಿನೊ ಚಂಡಮಾರುತದ ಪರಿಣಾಮ ಈ ಸಲವೂ ಮುಂದುವರಿಯಲಿದ್ದು, ಮಳೆಗಾಲದ ಕೊನೆ ಅವಧಿಯಲ್ಲಿ ಇದರ ಪ್ರಭಾವ ಕಡಿಮೆಯಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸುನಿಲ್ ಗವಾಸ್ಕರ್, ಕಳೆದ ಬಾರಿಯಂತೆ ಈ ವರ್ಷವೂ ಕೇರಳ ಮತ್ತು ಕರ್ನಾಟಕಕ್ಕೆ ಒಂದೇ ದಿನ (ಜೂ.6) ಮುಂಗಾರು ಪ್ರವೇಶವಾಗುವ ಸಾಧ್ಯತೆಗಳಿವೆ. ಹಿಂದೆಯೂ ಹಲವು ಬಾರಿ ಕರ್ನಾಟಕ ಮತ್ತು ಕೇರಳದ ಕರಾವಳಿಗೆ ಒಂದೇ ದಿನ ಮುಂಗಾರು ಪ್ರವೇಶಿಸಿದ ಉದಾಹರಣೆಗಳಿದ್ದು, ಈ ಬಾರಿಯೂ ಮರುಕಳಿಸುವ ಸಾಧ್ಯತೆಯಿದೆ ಎಂದರು.
ಮುಂದಿನ ಎರಡು ದಿನಗಳು ರಾಜ್ಯದ ದಕ್ಷಿಣ ಒಳನಾಡು ಸೇರಿದಂತೆ ಕೆಲವೆಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.