ಬೆಂಗಳೂರು, ಜೂ 01 (Daijiworld News/MSP): ಲೋಕಸಭೆ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸರ್ಕಾರ ಹೇಗಾದರೂ ಮಾಡಿ ಉಳಿಸಿಕೊಳ್ಳಲು ಕಸರತ್ತು ನಡೆಸಿರುವ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಪಕ್ಷದ ಹಿರಿಯ ನಾಯಕರು ಗರಂ ಆಗಿದ್ದು ಕಾಂಗ್ರೆಸ್ ಶೋಚನೀಯ ಸೋಲು ಹಾಗೂ ಗೊಂದಲದ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಇವೆಲ್ಲರಿಗೂ ಪಕ್ಷದ ಸೀನಿಯರ್ಸ್ ಬೆವರಿಳಿಸಿದ್ದಾರೆ. ಮಾತ್ರವಲ್ಲ ಸೂಪರ್ ಸಿಎಂ ಖ್ಯಾತಿ ಸಚಿವ ಎಚ್. ಡಿ ರೇವಣ್ಣ ವಿರುದ್ದ ಅವರ ಪಕ್ಷದ ಹಿರಿಯರು ತಿರುಗಿಬಿದ್ದಿದ್ದಾರೆ ಹೀಗಾಗಿ ಉಭಯ ಪಕ್ಷದ ಹಿರಿಯರಿಂದ ಬಿಸಿ ತಟ್ಟಿದಂತಾಗಿದೆ.
ಗುರುವಾರ ಸಂಜೆ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಸಭೆ ನಡೆದಿದ್ದು, ಸಚಿವ ಸ್ಥಾನಕ್ಕೆ ಒತ್ತಡ ತರುತ್ತಿರುವ ಶಾಸಕರನ್ನು ತಾತ್ಕಲಿಕವಾಗಿ ವಿಶ್ವಾಸಕ್ಕೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕರು ಅದೇ ಉಮೇದಿನಲ್ಲಿ ಗುರುವಾರ ರಾತ್ರಿ ಪಕ್ಷದ ಹಿರಿಯ ಮುಖಂಡರೊಂದಿಗೆ ಸಭೆ ನಡೆಸಿದರು.
ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ಗೆ ಯಾವುದೇ ರೀತಿಯ ಲಾಭವಾಗಿಲ್ಲ. ಮೈತ್ರಿ ಮಾಡೋವಾಗ ಹಿರಿಯ ನಾಯಕರನ್ನು ಪರಿಗಣಿಸಿದೇ ಏಕಾಏಕಿ ಜೆಡಿಎಸ್ ಜತೆ ಸಮಿಶ್ರ ಸರ್ಕಾರ ರಚನೆ ಮಾಡಿ ಅಧಿಕಾರ ಅನುಭವಿಸುತ್ತಿದ್ದೀರಿ. ಆದರೆ ಈಗ ಚುನಾವಣೆಯಲ್ಲಿ ಸೋತ ತಕ್ಷಣ ಹಿರಿಯ ನಾಯಕರ ನೆನಪಿಗೆ ಬಂದು ಅಭಿಪ್ರಾಯ ಕೇಳುತ್ತೀರಲ್ಲ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ನಡೆಸುವಾಗ ಹಿರಿಯ ನಾಯಕರು ನೀಡಿರುವ ಯಾವ ಸಲಹೆಗಳನ್ನೂ ಪರಿಗಣಿಸದಿರುವಾಗ ಈಗ ನೀಡುವ ಸಲಹೆಗಳನ್ನು ಎಷ್ಟರ ಮಟ್ಟಿಗೆ ಪರಿಗಣಿಸುತ್ತೀರಿ ಎಂದು ಹಿರಿಯ ನಾಯಕರಾದ ಕಾಗೋಡು ತಿಮ್ಮಪ್ಪ, ಎಸ್.ಆರ್. ಪಾಟೀಲ್, ಮೋಟಮ್ಮ ಸೇರಿ ಅನೇಕರು ಪಕ್ಷದ ಮುಖಂಡರ ನಡವಳಿಕೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ.
ರಾಜ್ಯದ ೨೮ ಕ್ಷೇತ್ರಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗಳಿಸಿದ ಎರಡೂ ಪಕ್ಷಗಳ ಮತಗಳನ್ನು ಕೂಡಿದರೆ, 18ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬಹುದಿತ್ತು. ಆದರೆ, ದಕ್ಕಿರುವುದು ಮಾತ್ರ ಒಂದೇ ಸ್ಥಾನ. ಅದೂ ಕೂಡಾ ಕಾಂಗ್ರೆಸ್ ಪಕ್ಷದ ವರ್ಚಸ್ಸಿನಿಂದ ಜಯಶಾಲಿಯಾಗಿರುವುದಲ್ಲ. ಸ್ವಂತ ಶಕ್ತಿಯಿಂದ ಗೆದ್ದಿದ್ದಾರೆ. ಒಂದು ವೇಳೆ ನಿರೀಕ್ಷಿಸಿದಷ್ಟು ಸ್ಥಾನಗಳು ನಮಗೆ ಸಿಕ್ಕಿದ್ದರೆ, ಹಿರಿಯ ನಾಯಕರನ್ನು ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಈಗ ಸೋಲಾಗಿರುವುದರಿಂದ ಅಭಿಪ್ರಾಯ ಪಡೆಯಲು ಮುಂದಾಗಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.