ಬೆಂಗಳೂರು, ಸೆ.30(DaijiworldNews/AA): ಮುಡಾ ಹಗರಣ, ವಾಲ್ಮೀಕಿ ಹಗರಣದಿಂದ ರಾಜ್ಯದ ಜನತೆಗೆ ಅನ್ಯಾಯವಾಗಿದೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅನಿವಾರ್ಯತೆ ಬಂದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಿಳಿಸಿದ್ದಾರೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮೈಸೂರಿಗೆ ಮೊದಲನೇ ಪಾದಯಾತ್ರೆ ಯಶಸ್ವಿಯಾಗಿದೆ. ಸದ್ಯ ಎರಡನೇ ಪಾದಯಾತ್ರೆ ಬಗ್ಗೆ ಚರ್ಚೆಯಾಗಿಲ್ಲ ಎಂದು ಹೇಳಿದರು.
ಮುಡಾ ಹಗರಣ, ವಾಲ್ಮೀಕಿ ಹಗರಣಗಳು ಸಿಬಿಐಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್ ವರಿಷ್ಠ ಮಲ್ಲಿಕಾರ್ಜುನ ಖರ್ಗೆಯವರೇ ಈ ಹಗರಣದ ಬಗ್ಗೆ ಮಾತಾಡಿದ್ದಾರೆ. ಸಿಎಂ ಸಿದ್ದರಾಮಯ್ಯರ ರಾಜೀನಾಮೆ ಅನಿವಾರ್ಯವಾಗಿದೆ ಎಂದಿದ್ದಾರೆ.
ಬಸವನಗೌಡ ಪಾಟೀಲ್ ಯತ್ನಾಳ್ ಅವರು ಪ್ರತ್ಯೇಕ ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಅನೇಕ ಸವಾಲುಗಳನ್ನು ನೋಡಿ ಬೆಳೆದಿದ್ದೇನೆ. ಹೀಗಾಗಿ ಎಲ್ಲಾ ಸವಾಲನ್ನು ಯಶಸ್ವಿಯಾಗಿ ಎದುರಿಸುತ್ತೇನೆ. ಸಮಸ್ಯೆಯಿಂದ ಓಡಿ ಹೋಗುವುದಲ್ಲ. ಜೀವನದಲ್ಲಿ ಸಮಸ್ಯೆ ಇದ್ದಾಗ ವಿಶ್ವಾಸ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷವನ್ನು ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ತರುತ್ತೇನೆ ಎಂದು ತಿಳಿಸಿದರು.