ಪಿತೋರ್ಗಢ,ಜೂ01(DaijiworldNews/AZM): ನಂದಾ ದೇವಿ ಪರ್ವತ ಏರಲು ತೆರಳಿದ್ದ 8 ಜನರು ಕಾಣೆಯಾಗಿದ್ದಾರೆ.
ಕಾಣೆಯಾದವರಲ್ಲಿ ಓರ್ವ ಭಾರತೀಯನೆಂದು ತಿಳಿದುಬಂದಿದೆ. ಮೇ 13ರಂದು ಉತ್ತರಾಖಂಡದ ಪಿತೋರಗಢದಲ್ಲಿರುವ ನಂದಾ ದೇವಿ ಪರ್ವತಕ್ಕೆ ಇಂಗ್ಲೆಂಡ್, ಅಮೆರಿಕ ಹಾಗೂ ಆಸ್ಟ್ರೇಲಿಯಾದ ಪರ್ವಾತರೋಹಿಗಳು ತೆರಳಿದ್ದರು. 7,434 ಮೀಟರ್ ಎತ್ತರ ಇರುವ ಈ ಪರ್ವತ ಏರಿ ಶುಕ್ರವಾರ ಅವರು ವಾಪಾಸಾಗಬೇಕಿತ್ತು. ಆದರೆ, ಈ ತಂಡ ಮರಳಿ ಬಂದಿಲ್ಲ.
ಶುಕ್ರವಾರ ತಡರಾತ್ರಿ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ರಕ್ಷಣಾ ತಂಡವೊಂದು ಇವರ ಹುಡುಕಾಟಕ್ಕೆ ಮುಂದಾಗಿದೆ. ಮುನ್ಸಿಯಾರಿಯಿಂದ ಆರಂಭವಾಗುವ ಚಾರಣ ನಂದಾ ದೇವಿ ಕ್ಯಾಂಪ್ವರೆಗೆ ಸಾಗುತ್ತದೆ. ಒಟ್ಟು 90 ಕಿ.ಮೀ ಕಾಲ್ನಡಿಗೆಯಲ್ಲಿ ಸಾಗಬೇಕಾಗುತ್ತದೆ. ಈ ವೇಳೆ ಸಾಕಷ್ಟು ಸವಾಲುಗಳನ್ನು ಪರ್ವತಾರೋಹಿಗಳು ಎದುರಿಸುತ್ತಾರೆ.
8 ಜನರ ತಂಡ ಪರ್ವತ ಇಳಿಯುವಾಗ ಕಾಣೆಯಾಗಿದೆ ಎನ್ನಲಾಗಿದೆ. ಸದ್ಯ ಇವರಿಗಾಗಿ ಹುಡುಕಾಟ ಮುಂದುವರಿದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಪ್ರಥಮ ಚಿಕಿತ್ಸೆ ನೀಡುವ ತಂಡ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದೆ.