ನವದೆಹಲಿ,ಜೂ 01 (Daijiworld News/MSP): ತನ್ನ ವಿವಾದಾತ್ಮಕ ಟ್ವೀಟ್ ನಿಂದಲೇ ಸುದ್ದಿಯಾಗುತ್ತಿದ್ದ ಕಾಂಗ್ರೆಸ್ನ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ, ಇದೀಗ ನಿರ್ಮಲಾ ಸೀತರಾಮನ್ ಅವರಿಗೆ ಕೊಂಕಿನ ಮಾತಿನ ಮೂಲಕ ಶುಭಾಷಯ ಕೋರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವೆಯಾಗಿ ಅಧಿಕಾರ ವಹಿಸಿಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಅಭಿನಂದನೆ ಸಲ್ಲಿಸುವ ಟ್ವೀಟ್ ನಲ್ಲಿ 1970ರಲ್ಲಿ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಮಾತ್ರ ವಹಿಸಿಕೊಂಡಿದ್ದ ವಿತ್ತ ಖಾತೆಯನ್ನು ನೀವು ನಿಭಾಯಿಸಲು ಹೊರಟ್ಟಿದ್ದೀರಿ .. ಮಹಿಳೆಯರಿಗೆ ಇದರಿಂದ ಹೆಮ್ಮೆಯಾಗುತ್ತಿದೆ. ಆದರೆ ಜಿ.ಡಿ. ಪಿ ಸುಧಾರಣೆ ಆಗಿಲ್ಲ . ವಿತ್ತ ಸಚಿವೆ ಆಗಿ ನೀವು ಅರ್ಥವ್ಯವಸ್ಥೆಗೆ ಚೇತರಿಕೆ ತರುತ್ತೀರಿ ಎಂದು ನಂಬಿದ್ದೇನೆ. ನಿಮಗೆ ನಮ್ಮ ಬೆಂಬಲವಿದೆ. ಶುಭಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ನಾಲ್ಕನೇ ತ್ರೈಮಾಸಿಕಕ್ಕೆ ಮತ್ತು ಮಾರ್ಚ್ 2019ರ ಅಂತ್ಯಕ್ಕೆ ಭಾರತದ ಜಿಡಿಪಿ(Gross Domestic Product) ಶೇ. 5.8ಕ್ಕೆ ಕುಸಿದಿದೆ ಎಂದು ವರದಿಯಾಗಿದೆ.
ರಮ್ಯಾ ಅವರ ಟ್ವೀಟ್ಗೆ ಸಾಕಷ್ಟು ವ್ಯಂಗ್ರಮಿಶ್ರಿತ ಪ್ರತಿಕ್ರಿಯೆಗಳು ನೆಟ್ಟಿಗರು ನೀಡಿದ್ದು, ನೀವು ಮೊದಲು ಮತ ಚಲಾವಣೆ ಮಾಡಿ ಬಳಿಕ ಮಾತನಾಡಿ ಎಂದು ಅವರ ವಿರುದ್ಧ ನೆಟ್ಟಿಗರು ಅಕ್ರೋಶ ವ್ಯಕ್ತಪಡಿಸಿದ್ದಾರೆ.