ನವದೆಹಲಿ, ಜೂ 01 (Daijiworld News/MSP): ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಅವರನ್ನು ಮತ್ತೊಮ್ಮೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಂಸದರ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ನೂತನ 52 ಮಂದಿ ಕಾಂಗ್ರೆಸ್ ಸಂಸದರು, ರಾಜ್ಯಸಭಾ ಸದಸ್ಯರು ಭಾಗಿಯಾಗಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನ ರಂದೀಪ್ ಸುರ್ಜೇವಾಲಾ, "ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕರಾಗಿ ನೇಮಕಗೊಂಡಿದ್ದಾರೆ. ಕಾಂಗ್ರೆಸ್ ಮೇಲೆ ನಂಬಿಕೆ ಇಟ್ಟ 12.13 ಕೋಟಿ ಜನರಿಗೆ ಅವರು ಧನ್ಯವಾದ ಹೇಳಿದ್ದಾರೆ," ಎಂದು ಟ್ವೀಟ್ ಮಾಡಿದ್ದಾರೆ.
ಸಭೆಯಲ್ಲಿ ಸಂಸತ್ ಕಲಾಪದಲ್ಲಿ ಈ ಬಾರಿ ಆಡಳಿತ ಪಕ್ಷದ ವಿರುದ್ಧ ಆರ್ಥಿಕ ಕುಂಠಿತ, ನಿರುದ್ಯೋಗ ಮತ್ತು ಇತರ ಕೆಲ ವಿಚಾರಗಳನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಬೇಕು ಎನ್ನುವ ಬಗ್ಗೆಯೂ ಚರ್ಚೆಗಳಾಗಿವೆ.