ನವದೆಹಲಿ, ಅ.02(DaijiworldNews/AK): ಸಿದ್ದರಾಮಯ್ಯ ಪತ್ನಿ ಮುಡಾ ಸೈಟ್ಗಳನ್ನು ವಾಪಾಸ್ ಕೊಟ್ಟಿರುವುದು ಊರು ಕೊಳ್ಳೆಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ಹಾಗೆ ಆಗಿದೆ ಎಂದು ಬಿಜೆಪಿ ನಾಯಕ, ಪರಿಷತ್ ಸದಸ್ಯ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಇದು ಸಿದ್ದರಾಮಯ್ಯನವರ ಪ್ರಾಮಾಣಿಕ ನಿರ್ಧಾರ ಅಲ್ಲ. ಸಂವಿಧಾನಕ್ಕಿಂತ ನಾನೇ ಮೇಲು ಎಂದು ಸಿದ್ದರಾಮಯ್ಯ ಅಂದುಕೊಂಡಿದ್ದರು. ಅವರು ಪ್ರಾಮಾಣಿಕವಾಗಿದ್ದರೆ ಮೊದಲೇ ಸೈಟ್ ವಾಪಸ್ ಕೊಡಬೇಕಿತ್ತು. ಆರಂಭದಲ್ಲಿ ಯಾರಿಗೂ ಜಗ್ಗಲ್ಲ, ಬಗ್ಗಲ್ಲ ಅಂತಾ ಹೇಳುತ್ತಿದ್ದರು. ದೊಡ್ಡ ವಕೀಲರನ್ನು ಕರೆಸಿ ಬ್ಯಾಡ್ ಕೇಸ್ನ ವಾದ ಮಾಡಿದರು. ಇ.ಡಿ ಪ್ರವೇಶ ಮಾಡಿದ ಮೇಲೆ ನಿವೇಶನ ವಾಪಸ್ ಕೊಡುವ ನಿರ್ಧಾರ ಮಾಡಿದರು ಎಂದು ಕಿಡಿ ಕಾರಿದರು.
ಮುಡಾದಲ್ಲಿ ಸಾವಿರಾರು ಕೋಟಿ ಹಗರಣ ನಡೆದಿದೆ. ಅಕ್ರಮದ ತನಿಖೆ ನಡೆಯಬೇಕು. ಯರ್ಯಾರು ತಪ್ಪು ಮಾಡಿದ್ದಾರೆ ಎಲ್ಲವೂ ಬಹಿರಂಗವಾಗಬೇಕು. ಸರ್ಕಾರದ ಅಕ್ರಮ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರಿಗೆ ಲಗಾಮು ಹಾಕುತ್ತೇವೆ ಎಂದು ಹೋದರು. ಸಂವಿಧಾನಕ್ಕೆ ಲಗಾಮು ಹಾಕೋಕೆ ಆಗುತ್ತಾ? ನೂರು ಜನರು ಬಂದರೂ ಆಗಲ್ಲ. ಬೆದರಿಕೆ ಎಲ್ಲಾ ಗೂಂಡಾ ರಾಜ್ಯದಲ್ಲಿ ನಡೆಯುತ್ತದೆ. ಪ್ರಜಾಪ್ರಭುತ್ವದಲ್ಲಿ ನಡೆಯಲ್ಲ ಎಂದು ವಾಗ್ದಾಳಿ ನಡೆಸಿದರು