ಬೆಂಗಳೂರು,ಜೂ 01 (Daijiworld News/MSP): ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿಭಾಯಿಸುತ್ತಿದ್ದ ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ಹುಡುಕಾಟುತ್ತಿದ್ದ ಬಿಜೆಪಿ ಹೈಕಮಾಂಡ್ ತನ್ನ ಹುಡುಕಾಟಕ್ಕೆ ಸಧ್ಯ ತಾತ್ಕಾಲಿಕ ಬ್ರೇಕ್ ಹಾಕಿದೆ.
ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ಎಸ್.ಯಡಿಯೂರಪ್ಪ ಅವರು 2016ರ ಏಪ್ರಿಲ್ನಲ್ಲಿ ಅಧಿಕಾರ ಸ್ವೀಕರಿಸಿದ್ದರು. 2018ರ ಮೇ ತಿಂಗಳಿಂದ ಅವರು ವಿರೋಧ ಪಕ್ಷದ ನಾಯಕರೂ ಆಗಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮ ಕಮಲ ಪಡೆಯಲ್ಲಿದೆ. ರಾಜ್ಯ ಘಟಕದ ಅಧ್ಯಕ್ಷರನ್ನು ಬದಲಿಸಲು 2018ರ ಡಿಸೆಂಬರ್ನಲ್ಲಿ ರಾಷ್ಟ್ರೀಯ ನಾಯಕರು ನಿರ್ಧರಿಸಿದ್ದರು. ಬಳಿಕ, ಲೋಕಸಭಾ ಚುನಾವಣೆ ಮುಗಿಯುವವರೆಗೆ ಯಡಿಯೂರಪ್ಪ ಅವರನ್ನು ಬದಲಿಸುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದರು. ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಹೈಕಮಾಂಡ್ ರಾಜ್ಯ ಘಟಕಕ್ಕೆ ಅಧ್ಯಕ್ಷರಿಗಾಗಿ ಹುಡುಕಾಟ ನಡೆಸಬಹುದು ಎಂಬ ಲೆಕ್ಕಚಾರಗಳಿತ್ತು. ಅಲ್ಲದೆ ಪಕ್ಷದ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಲಿಂಬಾವಳಿ, ಸಿ.ಟಿ.ರವಿ ಹಾಗೂ ಆರ್ ಅಶೋಕ್ ಮುಂತಾದ ರಾಜ್ಯ ಘಟಕದ ಅಧ್ಯಕ್ಷರ ಹುದ್ದೆಯ ಆಕಾಂಕ್ಷಿಗಳಿದ್ದರು.
ಆದರೆ ಶುಕ್ರವಾರ ಹೈಕಮಾಂಡ್ ಜತೆ ಮಾತುಕತೆ ನಡೆಸಿರುವ ಯಡಿಯೂರಪ್ಪ ಅವರಿಗೆ ಸಧ್ಯಕ್ಕೆ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ಬದಲಾವಣೆ ಇಲ್ಲ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಯಡಿಯೂರಪ್ಪ ಸ್ವಲ್ಪ ನಿರಾಳರಾಗಿದ್ದಾರೆ. ಇನ್ನೊಂದೆಡೆ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಕೆಡವಿಹಾಕುವ ಯಾವ ಪ್ರಯತ್ನಕ್ಕೂ ರಾಜ್ಯ ಬಿಜೆಪಿ ಮುಂದಾಗಬಾರದು ಎಂದು ಬಿಜೆಪಿ ಹೈಕಮಾಂಡ್ ಸ್ಪಷ್ಟ ಆದೇಶ ನೀಡಿದೆ.