ಬೆಂಗಳೂರು, ಅ. 03(DaijiworldNews/AK): ಹೈಕಮಾಂಡಿನಿಂದ ನೇಮಿಸಲ್ಪಟ್ಟ ರಾಜ್ಯಾಧ್ಯಕ್ಷರನ್ನು ಪ್ರಶ್ನಿಸುವುದು ಎಂದರೆ ಹೈಕಮಾಂಡನ್ನೇ ಪ್ರಶ್ನಿಸಿದಂತೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಅವರು ಆಕ್ಷೇಪಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಹಿರಿಯರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರರ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಅನಗತ್ಯವಾಗಿ ಚರ್ಚೆಗಳನ್ನು ಮಾಡುತ್ತಿದ್ದಾರೆ. ಅವರಿಗೆ ಅನುಭವ ಇಲ್ಲ; ಚಿಕ್ಕವರು ಎಂದೆಲ್ಲ ಮಾತನಾಡುತ್ತಾರೆ ಎಂದು ಟೀಕಿಸಿದರು.
ಯಡಿಯೂರಪ್ಪ ಅವರ ಮಗ ಎಂಬ ಕಾರಣಕ್ಕೆ ಒಪ್ಪುವುದಿಲ್ಲ ಎನ್ನುತ್ತಾರೆ. ಯತ್ನಾಳ್ರಲ್ಲೇ ಒಂದಷ್ಟು ಗೊಂದಲಗಳಿವೆ. ವಿಜಯೇಂದ್ರರನ್ನು ರಾಜ್ಯದ ಅಧ್ಯಕ್ಷರನ್ನಾಗಿ ಮಾಡುವ ಸಂದರ್ಭದಲ್ಲಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ನರೇಂದ್ರ ಮೋದಿಯವರ ಸಲಹೆ ಪಡೆದು ನೇಮಕ ಮಾಡಿದ್ದಾರೆ ಎಂದು ವಿವರಿಸಿದರು. ನೇಮಕ ಮಾಡುವಾಗ ರಾಜ್ಯ ಬಿಜೆಪಿ ಹಿರಿಯ ಮುಖಂಡರು, ಕಾರ್ಯಕರ್ತರನ್ನು ಅವರದೇ ಆದ ರೀತಿಯಲ್ಲಿ ಸರ್ವೇ ಮಾಡಿಸಿ ಅಭಿಪ್ರಾಯ ಪಡೆದಿದ್ದಾರೆ. ಸ್ವಲ್ಪ ಮಟ್ಟಿಗೆ ಪರಿವಾರದ ಸಲಹೆಯನ್ನೂ ಕೇಳಿರುತ್ತಾರೆ ಎಂದರು.
ಈಗಿನ ರಾಜ್ಯಾಧ್ಯಕ್ಷರು ಕಿರಿಯರಾಗುವುದು ಹೇಗೆ?
ಭಿನ್ನಾಭಿಪ್ರಾಯ ಇದ್ದರೆ ದೆಹಲಿಗೆ ಹೋಗಿ ಹೈಕಮಾಂಡನ್ನು ಭೇಟಿ ಮಾಡಿ ಸಲಹೆ, ಸೂಚನೆ ಕೊಡಬೇಕು. ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಆಗ್ರಹಿಸಿದರು. ಹೀಗೆ ರಸ್ತೆಯಲ್ಲಿ, ಹೋದಲ್ಲಿ ಬಂದಲ್ಲಿ ಯಾವ್ಯಾವುದೋ ಸಭೆಗೆ ಹೋದಲ್ಲಿ ಮಾತನಾಡುವುದು ಸರಿಯಲ್ಲ. ಅವರು ನಮ್ಮ ಪಕ್ಷದ ಮುಖಂಡರು. ಈಶ್ವರಪ್ಪನವರು ನಮ್ಮ ಪಕ್ಷ ಬಿಟ್ಟು ಹೋದವರು. ಅವರನ್ನು ಪಕ್ಷವು ಉಚ್ಚಾಟಿಸಿದೆ. ಬಿಜೆಪಿಯಲ್ಲಿ ಇದ್ದುಕೊಂಡು ಈಶ್ವರಪ್ಪನವರನ್ನು ಮುಖ್ಯಮಂತ್ರಿ ಮಾಡುವುದಾಗಿ ಹೇಳುತ್ತಾರೆ ಎಂದು ಆರೋಪಿಸಿದರು.
ರಾಜ್ಯಾಧ್ಯಕ್ಷರಿಗೆ ಮಾನಸಿಕ ಕಿರಿಕಿರಿ ಉಂಟು ಮಾಡುವ ಉದ್ದೇಶ ಯತ್ನಾಳರದು. ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳಿದರು. ಹಿಂದೆ 42-44 ವರ್ಷದ ಎ.ಕೆ.ಸುಬ್ಬಯ್ಯನವರು ಅಧ್ಯಕ್ಷರಾಗಿದ್ದರು. ಸ್ವತಃ ಯಡಿಯೂರಪ್ಪನವರು ಅಧ್ಯಕ್ಷರಾದಾಗ ಅವರಿಗೆ 48 ವರ್ಷ; ಈಗ ವಿಜಯೇಂದ್ರರಿಗೆ 49-50 ವರ್ಷ. ಇವರು ಕಿರಿಯರಾಗುವುದು ಹೇಗೆ ಎಂದು ಹರತಾಳು ಹಾಲಪ್ಪ ಅವರು ಪ್ರಶ್ನೆಯನ್ನು ಮುಂದಿಟ್ಟರು.
ವಿಜಯೇಂದ್ರರು ರಾಜ್ಯಾಧ್ಯಕ್ಷರಾದ ಬಳಿಕ ಈ ಸರಕಾರ, ಸಿದ್ದರಾಮಯ್ಯರಂಥ ದೊಡ್ಡ ನಾಯಕರನ್ನು ತುದಿಗಾಲ ಮೇಲೆ ನಿಲ್ಲಿಸಿದ್ದಾರೆ.