ಬೆಂಗಳೂರು,ಅ. 03(DaijiworldNews/AK): ದಿನೇಶ್ ಗುಂಡೂರಾವ್ ಅವರು ಯಾವುದನ್ನು ಪ್ರಮೋಟ್ ಮಾಡಲು ಹೊರಟಿದ್ದಾರೆ? ಯಾವುದಾದರೂ ಹೊಸ ದಂಧೆ ಶುರು ಮಾಡಿದ್ದಾರಾ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಬ್ರಾಹ್ಮಣರಾದ ವೀರ ಸಾವರ್ಕರ್ ಅವರು ದನದ ಮಾಂಸ ತಿನ್ನುತ್ತಿದ್ದರು ಎಂಬ ಸಚಿವ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದರು.
ತಮ್ಮ ದಂಧೆಗೆ ಬೆಂಬಲ ಸಿಗಲೆಂದು ಆ ರೀತಿ ಮಾತನಾಡುತ್ತಿದ್ದಾರಾ? ಎಂದು ಪ್ರಶ್ನಿಸಿದರು. ಅವರು ಗೋಹತ್ಯೆಯನ್ನು ಬೆಂಬಲಿಸಿ ಮಾತನಾಡಿದ್ದಾರಾ? ಅಥವಾ ಗೋಮಾಂಸ ತಿನ್ನುವುದನ್ನು ಸಮರ್ಥಿಸಿ ಮಾತನಾಡಿದ್ದಾರಾ ಎಂದು ಕೇಳಿದರು.
ಮೂಲಭೂತವಾದ ಮತ್ತು ರಾಷ್ಟ್ರವಾದದ ನಡುವೆ ಅಗಾಧ ಅಂತರವಿದೆ. ಮೂಲಭೂತವಾದವು ದೇಶ ಒಡೆದು ಅಖಂಡ ಭಾರತದ ವಿಭಜನೆಗೆ ಕಾರಣವಾಯಿತು. ಪಾಕಿಸ್ತಾನ ನಿರ್ಮಾಣ, ಲಕ್ಷಾಂತರ ಜನರ ಮಾರಣಹೋಮಕ್ಕೆ ಕಾರಣವಾಗಿತ್ತು. ರಾಷ್ಟ್ರವಾದವು ದೇಶಭಕ್ತಿಯಿಂದ ಕೂಡಿದೆ. ಅದರಿಂದ ದೇಶ ಉಳಿಸಬಹುದು. ಮೂಲಭೂತವಾದದಿಂದ ಪಾಕಿಸ್ತಾನ ನಿರ್ಮಾಣವಾಗುತ್ತದೆ. ದಿನೇಶ್ ಗುಂಡೂರಾವ್ ಮತ್ತವರ ಪಕ್ಷವು ಯಾವುದನ್ನು ಸಮರ್ಥಿಸುತ್ತದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮೂಲಭೂತವಾದ ಸಮರ್ಥಿಸಿ ಮತ್ತಷ್ಟು ಪಾಕಿಸ್ತಾನ ನಿರ್ಮಾಣ ಉದ್ದೇಶವಿದೆಯೇ ಎಂದು ಕೇಳಿದರು. ಗಾಂಧಿ ಗೋಹತ್ಯೆ ಪರ ಇದ್ದರೇ? ವಿರುದ್ಧ ಇದ್ದರೇ? ಒಂದು ದಿನ ತಮಗೆ ಅಧಿಕಾರ ಸಿಕ್ಕಿದರೆ ಗೋಹತ್ಯೆ ಸಂಪೂರ್ಣ ನಿಷೇಧಿಸುವುದಾಗಿ ಗಾಂಧಿ ಹೇಳಿದ್ದರು. ಈಗ ದಿನೇಶ್ ಗುಂಡೂರಾವ್ ಮತ್ತವರ ಪಕ್ಷವು ಗಾಂಧಿ ವಿಚಾರಧಾರೆ ಪರವೇ ಅಥವಾ ವಿರುದ್ಧವೇ ಎಂದು ಕೇಳಿದರು.
ಗಾಂಧಿ ವಿಚಾರಧಾರೆ ಪರ ಇದ್ದರೆ ಗೋಹತ್ಯೆ ಮತ್ತು ಗೋಮಾಂಸ ಭಕ್ಷಣೆಯನ್ನು ಸಮರ್ಥಿಸುವುದಿಲ್ಲ. ಜಿನ್ನಾ ವಿಚಾರಧಾರೆ ಪರ ಇದ್ದರೆ ಗೋಹತ್ಯೆ, ಭಾರತ ವಿಭಜನೆ ಮತ್ತು ಗೋಮಾಂಸ ಭಕ್ಷಣೆಯನ್ನು ಸಮರ್ಥಿಸುತ್ತಾರೆ ಎಂದು ತಿಳಿಸಿದರು.
ದಿನೇಶ್ ಗುಂಡೂರಾವ್, ಜಿನ್ನಾ ವಿಚಾರಧಾರೆ ಪರ ಇದ್ದಾರಾ ಅಥವಾ ಗಾಂಧಿ ವಿಚಾರಧಾರೆ ಪರ ಇರುವರೇ ಎಂದು ಪ್ರಶ್ನಿಸಿದರು. ಇದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.