ಹೊಸದಿಲ್ಲಿ, ಜೂ01(Daijiworld News/SS): ಲೋಕಸಭೆಯಲ್ಲಿ ಕಾಂಗ್ರೆಸ್ನ 52 ಸಂಸದರು ಇದ್ದು, ಸಂಸತ್ತಿನಲ್ಲಿ ಬಿಜೆಪಿ ಕೆಲಸ ಸುಲಭವಾಗಲು ಬಿಡಲಾರೆವು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಜತೆಗಿನ ಸೈದ್ಧಾಂತಿಕ ಸಂಘರ್ಷವನ್ನು ಮುಂದುವರಿಸುತ್ತೇವೆ. ಕಾಂಗ್ರೆಸ್ ಸದಸ್ಯರು ಮತ್ತು ಕಾರ್ಯಕರ್ತರು ಹೆಮ್ಮೆಯ ಧೈರ್ಯಶಾಲಿ ಸಿಂಹಗಳು. ಹೀಗಾಗಿ, ಸಂವಿಧಾನದ ರಕ್ಷಣೆಗಾಗಿ ಪಕ್ಷದ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಕಳೆದ ಬಾರಿ ನಾವು 44 ಸದಸ್ಯರಿದ್ದೆವು. ಈ ಬಾರಿ ನಮ್ಮ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಹೀಗಾಗಿ ಇನ್ನು ಮುಂದೆ ನಾವು ಪ್ರತಿದಿನವೂ ಬಿಜೆಪಿ ವಿರುದ್ಧ ಹೋರಾಟ ಸಂಘಟಿಸೋಣ. ಆಂತರಿಕವಾಗಿ ನಾವು ಆತ್ಮಾವಲೋಕನ ಮಾಡಿಕೊಳ್ಳೋಣ. ನಮ್ಮನ್ನು ನಾವು ಹುರಿದುಂಬಿಸಿಕೊಳ್ಳೋಣ. ನಾವೆಲ್ಲರೋ ಒಂದಾಗಿ ಮುಂದೆ ಸಾಗಿದರೆ ಎಲ್ಲವೂ ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ಸಂಸದೀಯ ನಾಯಕಿಯಾಗಿ ಆಯ್ಕೆಯಾದ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಜೊತೆಗೆ ಚುನಾವಣೆಯಲ್ಲಿ ಬೆಂಬಲಿಸಿದ ಮತದಾರರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ್ದಾರೆ.
ರಾಜೀನಾಮೆ ಹಿಂಪಡೆಯಬೇಕೆಂಬ ಮುಖಂಡರ ಒತ್ತಾಯಕ್ಕೆ ಮಣಿಯುವುದಿಲ್ಲ. ಯಾರಾದರೂ ಹೊಸಬರು ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳಲಿ ಎಂದು ರಾಹುಲ್ ತಿಳಿಸುತ್ತಿದ್ದಾರೆ.