ಮೈಸೂರು, ಜೂ01(Daijiworld News/SS): ಎಲ್ಲಾ ಧರ್ಮದವರಿಗೂ ಸಮಾನ ಸವಲತ್ತುಗಳು ಇರಬೇಕು. ಸರ್ವ ಧರ್ಮ ಸಮಾನತೆ ದೇಶಾದ್ಯಾಂತ ಜಾರಿಗೆ ಬರಬೇಕು ಎಂದು ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳಿಗೆ ಕಡಿಮೆ ಸವಲತ್ತುಗಳಿವೆ. ಎಲ್ಲಾ ಧರ್ಮದವರಿಗೂ ಸಮಾನ ಸವಲತ್ತುಗಳು ಇರಬೇಕು. ಸರ್ವ ಧರ್ಮ ಸಮಾನತೆ ದೇಶಾದ್ಯಾಂತ ಜಾರಿಗೆ ಬರಬೇಕು. ಆದರೆ ಮುಸ್ಲಿಮರಿಗೆ ಸವಲತ್ತುಗಳು ಹೆಚ್ಚಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ನಿಯಮಗಳನ್ನು ಜಾರಿಗೆ ತರಬೇಕು ಎಂದರು. ರಾಮಮಂದಿರ ನಿರ್ಮಾಣ ಕೇಂದ್ರ ಸರ್ಕಾರದ ಆಧ್ಯತೆ ಆಗಬೇಕು ಎಂದು ಒತ್ತಾಯಿಸಿದರು.
ಅಂಬೇಡ್ಕರ್ ಕೊಟ್ಟ ಸಂವಿಧಾನ ಬಹಳ ಶ್ರೇಷ್ಟವಾದದ್ದು. ಇದನ್ನ ಬದಲಾವಣೆ ಮಾಡುತ್ತೇನೆ ಎನ್ನುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಕೊಡುವ ಬಿಜೆಪಿ ನಾಯಕರನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದರು.
ರಾಜ್ಯ ಸಮ್ಮಿಶ್ರ ಸರ್ಕಾರದ ಬಗ್ಗೆ ನಾನು ಮಾತನಾಡಲ್ಲ. ನಾನು ಮೊದಲೇ ಹೇಳಿದ್ದೆ, ಮೂರು ಪಕ್ಷದವರು ಸೇರಿ ಸರ್ಕಾರ ರಚನೆ ಮಾಡಬೇಕು ಅಂತ. ಆದರೆ ರಾಜ್ಯದಲ್ಲಿ ಎರಡು ಪಕ್ಷ ಸೇರಿ ಸರ್ಕಾರ ರಚನೆ ಮಾಡಿತ್ತು. ಮೂರು ಪಕ್ಷದವರು ಸೇರಿ ಸರ್ಕಾರ ರಚನೆ ಮಾಡಬೇಕಿತ್ತು. ಇದರಿಂದ ರಾಜ್ಯ ಹಾಗೂ ದೇಶ ಅಭಿವೃದ್ಧಿ ಹೊಂದುತ್ತಿತ್ತು ಎಂದು ಹೇಳಿದರು.
ಬಿಜೆಪಿಯವರನ್ನು ಸೋಲಿಸಬೇಕೆಂಬ ಏಕೈಕ ಉದ್ದೇಶದಿಂದ ಜೆಡಿಎಸ್ - ಕಾಂಗ್ರೆಸ್ ಒಂದಾಗಿದ್ದು, ಅವರ ಸೋಲಿಗೆ ಕಾರಣವಾಯಿತು. ಗೋಡ್ಸೆ ಪರ ವಕಾಲತ್ತು ವಹಿಸಿದ್ದ ವ್ಯಕ್ತಿ ಚುನಾವಣೆಯಲ್ಲಿ ಗೆದ್ದಿದ್ದು ನನಗೆ ಅಸಮಾಧಾನ ತಂದಿದೆ, ಅಂತಹವರು ಗೆಲ್ಲಬಾರದಿತ್ತು ಎಂದು ಹೇಳಿದರು.