ಬೆಂಗಳೂರು, ಅ.06(DaijiworldNews/AA): ಪಾಕ್ ಪ್ರಜೆಗಳ ಬಂಧನ ಪ್ರಕರಣದ ಪ್ರಮುಖ ರೂವಾರಿ ಪರ್ವೇಜ್ನನ್ನು ರಾಜ್ಯ ರಾಜಧಾನಿಯಲ್ಲಿ ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜಿಗಣಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣದ ಪ್ರಮುಖ ಆರೋಪಿಯನ್ನು ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಸದ್ಯ ಆರೋಪಿ ಪರ್ವೇಜ್ ಜಿಗಣಿ ಪೊಲೀಸರ ವಶದಲ್ಲಿದ್ದು, ಆತನ ವಿಚಾರಣೆ ನಡೆಸಲಾಗುತ್ತಿದೆ.
ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಬರಲು ಪರ್ವೇಜ್ ಪ್ರಮುಖ ಕಾರಣವಾಗಿದ್ದು, ಈತನೇ ಭಾರತೀಯ ದಾಖಲೆಗಳನ್ನು ಕೂಡ ಎಲ್ಲಾ ಪಾಕಿಸ್ತಾನಿ ಪ್ರಜೆಗಳಿಗೆ ಮಾಡಿಕೊಟ್ಟಿದ್ದ. ಜೊತೆಗೆ ಯೂನಸ್ ಆಲ್ಗೋರ್ ಧರ್ಮ ಗುರುಗಳ ಪ್ರವಚನಗಳ ಪ್ರಚಾರಕ. ಬಂಧಿತ ಪ್ರಜೆಗಳೆಲ್ಲರೂ ಸಹ ಇವನ ಸಂಪರ್ಕದಲ್ಲಿ ಇದ್ದರು ಎನ್ನಲಾಗಿದ್ದು, ಇವನ ಸೂಚನೆಯಂತೆ ಧರ್ಮ ಗುರುಗಳ ಪ್ರವಚನವನ್ನು ಪಾಕ್ ಪ್ರಜೆಗಳು ಭಾರತದಲ್ಲಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.