ಶ್ರೀನಗರ, ಜೂ01(Daijiworld News/SS): ಉಗ್ರ ಸಂಘಟನೆಗಳಿಗೆ ಸೇರಿದ್ದ ಐವರು ಯುವಕರು, ಪೊಲೀಸರು ಮತ್ತು ಕುಟುಂಬದ ಸದಸ್ಯರ ಪ್ರಯತ್ನದಿಂದಾಗಿ ಉಗ್ರ ಹಾದಿಯನ್ನು ತೊರೆದು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದ್ದಾರೆ.
ವಿವಿಧ ಉಗ್ರ ಸಂಘಟನೆ ಸೇರಿದ್ದ ಐವರು ಯುವಕರು ಹಿಂಸೆಯ ದಾರಿ ತೊರೆದು ಅಂತಿಮವಾಗಿ ಮುಖ್ಯವಾಹಿನಿಗೆ ಮರಳಿದ್ದಾರೆ. ಇದು ಅವರ ಕುಟುಂಬದ ಸದಸ್ಯರು ಮತ್ತು ಕುಲ್ಗಾಮ್ ಪೊಲೀಸರು ಪ್ರಯತ್ನದ ಫಲವಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಯೋತ್ಪಾದಕ ಗುಂಪುಗಳಿಗೆ ಸೇರಿದ್ದ ಈ ಯುವಕರನ್ನು ಸಮಾಜದ ಮುಖ್ಯಧಾರೆಗೆ ಮರಳಿ ತರಲು ಪೊಲೀಸರು ಮತ್ತು ಅವರ ಕುಟುಂಬದ ಸದಸ್ಯರು ಸತತ ಪ್ರಯತ್ನ ನಡೆಸಿದ್ದರು. ಭದ್ರತೆಯ ದೃಷ್ಟಿಯಿಂದ ಅವರ ಹೆಸರಗಳನ್ನು ಬಹಿರಂಗಪಡಿಸಲು ಆಗುವುದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು. ಅವರ ಹೆಸರನ್ನು ಮತ್ತು ಇತರ ವಿವರಗಳನ್ನು ಭದ್ರತೆಯ ಕಾರಣಗಳಿಗಾಗಿ ಅವರು ಬಹಿರಂಗಪಡಿಸಿಲ್ಲ.
ನಿಮ್ಮ ಮುಂದಿನ ಜೀವನ ಶಾಂತಿಯುತ ಹಾಗೂ ಉಜ್ವಲವಾಗಲಿ ಎಂದು ಯುವಕರಿಗೆ ಪೊಲೀಸರು ಶುಭ ಹಾರೈಸಿದ್ದಾರೆ. ಗುಂಡಿನ ಚಕಮಕಿ ತೀವ್ರವಾಗಿದ್ದ ಸಮಯದಲ್ಲಿಯೂ ಶರಣಾಗಲು ಅವಕಾಶ ಕಲ್ಪಿಸಲಾಗಿತ್ತು. ಹಿಂಸಾ ಮಾರ್ಗದಿಂದ ಹೊರ ಬಂದ ಯುವಕರು ತಮ್ಮ ಕುಟುಂಬಗಳಿಗೆ ಹಿಂದಿರುಗಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಕಾಶ್ಮೀರದಲ್ಲಿ ಹತ್ತಾರು ಭಯೋತ್ಪಾದಕರು ಶಸ್ತ್ರಾಸ್ತ್ರ ಕೆಳಗಿಟ್ಟು ಪೊಲೀಸರಿಗೆ ಶರಣಾಗಿದ್ದಾರೆ.