ನವದೆಹಲಿ, ಜೂ01(Daijiworld News/SS): ನಾನೊಬ್ಬ ಸಾಮಾನ್ಯ ಮನುಷ್ಯ. ಆದರೆ, ಮೋದಿ ಅವರು ಅಸಾಮಾನ್ಯ ಪ್ರತಿಭಾವಂತ. ಅವರಿಗೆ ನನ್ನನ್ನು ಹೋಲಿಸಬೇಡಿ ಎಂದು ಪ್ರತಾಪ್ ಚಂದ್ರ ಸಾರಂಗಿ ಹೇಳಿದ್ದಾರೆ.
ನನ್ನನ್ನು ಒಡಿಶಾದ ಮೋದಿ ಎಂದು ಜನರು ಏಕೆ ಕರೆಯುತ್ತಿದ್ದಾರೆ ಗೊತ್ತಿಲ್ಲ. ಈ ರೀತಿಯ ಹೋಲಿಕೆಯೇ ಅಪ್ರಸ್ತುತ. ನಾನೊಬ್ಬ ಸಾಮಾನ್ಯ ಮನುಷ್ಯ. ಆದರೆ, ಮೋದಿ ಅವರು ಅಸಾಮಾನ್ಯ ಪ್ರತಿಭಾವಂತ. ಮೋದಿ ಅವರು ದೇಶವನ್ನು ಉತ್ತುಂಗ ಸ್ಥಿತಿಗೆ ಕೊಂಡೊಯ್ದಿದ್ದಾರೆ. ಜಗತ್ತಿನಾದ್ಯಂತ ಜನತೆ ಭಾರತದ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದಾರೆ. ದೇಶಕ್ಕೆ ಕೀರ್ತಿ ತಂದಿರುವ ಮೋದಿ ಅವರ ಸಾಮರ್ಥ್ಯ, ಪ್ರತಿಭೆಯನ್ನು ನನ್ನ ಜತೆ ಹೋಲಿಕೆ ಮಾಡಲು ಸಹ ಸಾಧ್ಯವಿಲ್ಲ. ಈ ರೀತಿ ಹೋಲಿಕೆ ನ್ಯಾಯೋಚಿತವಲ್ಲ ಎಂದು ತಿಳಿಸಿದ್ದಾರೆ.
ನಾನು ಸಚಿವನಾದರೂ ನನ್ನ ಸ್ವಭಾವ ಅಥವಾ ನಿಲುವುಗಳಲ್ಲಿ ಬದಲಾವಣೆಯಾಗುವುದಿಲ್ಲ. ಇದುವರೆಗೆ ಬದುಕು ಸಾಗಿಸಿದ ರೀತಿಯಲ್ಲೇ ಇನ್ನು ಮುಂದೆಯೂ ಇರುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಮೋದಿ ಅವರು ಹೊಸ ಜವಾಬ್ದಾರಿ ನೀಡಿದ್ದಾರೆ. ವಿಶ್ವಾಸಕ್ಕೆ ಧಕ್ಕೆಯಾಗದಂತೆ ನಾನು ಕಾರ್ಯನಿರ್ವಹಿಸಬೇಕಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ಹೊಸ ಅನುಭೂತಿ ನೀಡಿತು. ಜನರು ನನಗೆ ಅಪಾರ ಪ್ರೀತಿ ತೋರಿದ್ದಾರೆ. ಜನ ಸೇವೆ ಮಾಡಲು ಅವಕಾಶ ಮತ್ತು ಸಾಮರ್ಥ್ಯವನ್ನು ನೀಡಿದ್ದಕ್ಕೆ ದೇವರಿಗೆ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಸರಳ ಜೀವನ ನಡೆಸುತ್ತಿರುವುದಕ್ಕೆ ಜನರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿರುವ ಕೇಂದ್ರದ ನೂತನ ಸಚಿವ ಅವರನ್ನು ’ಒಡಿಶಾದ ಮೋದಿ’ ಎಂದು ಕರೆಯುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.