ಬೆಂಗಳೂರು,ಜೂ02(DaijiworldNews/AZM) : 20 ದಿನಗಳೊಳಗಾಗಿ ನವದೆಹಲಿಯಲ್ಲಿ ರಾಜ್ಯದ ಕಚೇರಿ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ಕೇಂದ್ರದಲ್ಲಿ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ತವರಿಗೆ ಮರಳಿದ ಮೂವರು ಸಂಸದರಿಗೆ ಶನಿವಾರ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಸದಾನಂದ ಗೌಡರು, ರಾಜ್ಯದಿಂದ ಸಮಸ್ಯೆ ಎಂದು ಯಾರೇ ಬಂದರೂ ಅಂತಹವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ಕಚೇರಿಯನ್ನು ಸ್ಥಾಪಿಸಲಾಗುತ್ತಿದ್ದು, 15 ದಿನಗಳಿಗೊಮ್ಮೆ ರಾಜ್ಯದ ನಾಲ್ವರು ಕೇಂದ್ರ ಸಚಿವರು ಸಭೆ ನಡೆಸುತ್ತೇವೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಸುರೇಶ್ ಅಂಗಡಿ, ರೈಲ್ವೆ ಇಲಾಖೆಯಲ್ಲಿ ಹೊಸ ಯೋಜನೆಗಳ ಅನುಷ್ಠಾನ, 2000 ಕ್ಕಿಂತಲೂ ಪೂರ್ವದಿಂದಲೂ ಬಾಕಿ ಉಳಿದಿರುವ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಪ್ರಯತ್ನ ಮಾಡಲಾಗುವುದು. ಕರ್ನಾಟಕದಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.
ನಿರ್ಮಲಾ ಸೀತಾರಾಮನ, ಸದಾನಂದಗೌಡ, ಸುರೇಶ್ ಅಂಗಡಿ ಹಾಗೂ ನಾನು 15 ದಿನಕ್ಕೊಮ್ಮೆ ಒಬ್ಬರ ಮನೆಯಲ್ಲಿ ಸಭೆ ಸೇರುತ್ತೇವೆ. ಇಲ್ಲಿ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಲ್ಲಿ ಆಗಬೇಕಾದ ಕೆಲಸದ ಬಗ್ಗೆ ವಿಚಾರ ಮಾಡಿ, ಫಾಲೋಅಪ್ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.