ನವದೆಹಲಿ,ಜೂ02(DaijiworldNews/AZM): ಕೇಂದ್ರದ ಪ್ರಸ್ತಾವಿತ ಹೊಸ ಶಿಕ್ಷಣ ನೀತಿಯಡಿ ಹಿಂದಿ ಸೇರಿದಂತೆ ಮೂರು ಭಾಷೆಗಳ ಕಲಿಕೆಯ ನೀತಿಯ ವಿರುದ್ಧ ತಮಿಳುನಾಡಿನಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ತ್ರಿಭಾಷಾ ನೀತಿ ಹೆಸರಿನಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆಗೆ ಯತ್ನಿಸಿದರೆ ಸಮರವನ್ನೇ ಮಾಡಬೇಕಾಗುತ್ತದೆ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಕಟ್ಟೆಚ್ಚರಿಕೆ ನೀಡಿದ್ದಾರೆ.
“ತಮಿಳಿಗರ ರಕ್ತದಲ್ಲಿ ಹಿಂದಿಗೆ ಅವಕಾಶವೇ ಇಲ್ಲ. ತಮಿಳುನಾಡಿನಲ್ಲಿ ಹಿಂದಿ ಹೇರುವುದೆಂದರೆ ಜೇನುಗೂಡಿಗೆ ಕಲ್ಲು ಎಸೆದಂತೆ” ಎಂದು ಎಂ.ಕೆ. ಸ್ಟಾಲಿನ್ ಅಬ್ಬರಿಸಿದ್ದಾರೆ. ತಮ್ಮ ಡಿಎಂಕೆ ಸಂಸದರು ಈ ವಿಚಾರವನ್ನು ಸಂಸತ್ನಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಇನ್ನು ತಮಿಳುನಾಡಿನ ಜನರಿಗೆ ಹಿಂದಿ ಭಾಷೆ ಹೇರಿಕೆ ಪ್ರಯತ್ನವನ್ನು ಎಂದಿಗೂ ಸಹಿಸಲಾಗುವುದಿಲ್ಲ ಎಂದು ಡಿಎಂಕೆ ನಾಯಕ ಟಿ.ಶಿವ ತಿಳಿಸಿದ್ದಾರೆ.ಬಲವಂತವಾಗಿ ಜನರ ಮೇಲೆ ಹಿಂದಿ ಭಾಷೆಯನ್ನು ಹೇರಲು ಪ್ರಯತ್ನಿಸಿದರೆ ತಾವು ಯಾವುದೇ ಪರಿಣಾಮಗಳನ್ನು ಎದುರಿಸಲು ಸಿದ್ದ ಎಂದು ಹೇಳಿದರು.
ಡಿಎಂಕೆ ನಾಯಕ ಶಿವ ಅವರ ನಿಲುವನ್ನು ಬೆಂಬಲಿಸಿರುವ ನಟ ಹಾಗೂ ಮಕಲ್ ನಿಧಿ ಮಯ್ಯಂ ಸಂಸ್ಥಾಪಕ ಕಮಲ್ ಹಾಸನ್ ಅವರು, "ನಾನು ಅನೇಕ ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ, ನನ್ನ ಪ್ರಕಾರ ಹಿಂದಿ ಭಾಷೆಯನ್ನು ಯಾರ ಮೇಲೆಯೂ ಒತ್ತಾಯವಾಗಿ ಹೇರಬಾರದು. ಯಾರಿಗೆ ಯಾವ ಭಾಷೆ ಆಸಕ್ತಿ ಇದೆಯೋ ಅದನ್ನು ಕಲಿಯುವ ಅವಕಾಶ ಇರಬೇಕು ಎಂದು ಹೇಳಿದ್ದಾರೆ.