ನವದೆಹಲಿ, ಅ.12(DaijiworldNews/AA): ಬಾಲಸೋರ್ ಅಪಘಾತದಲ್ಲಿ ಸುಮಾರು 300 ಪ್ರಯಾಣಿಕರು ಸಾವನ್ನಪ್ಪಿದ ಬಳಿಕವೂ ಕೇಂದ್ರ ಸರ್ಕಾರವು ಎಚ್ಚೆತ್ತುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಮೈಸೂರು-ದರ್ಭಾಂಗ ರೈಲು ಅಪಘಾತದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೈಸೂರು-ದರ್ಭಾಂಗ್ ರೈಲು ಅಪಘಾತವು ಭೀಕರವಾದ ಬಾಲಸೋರ್ ಅಪಘಾತವನ್ನು ಹೋಲುತ್ತದೆ. ಆ ಅಪಘಾತದಿಂದ ಸರ್ಕಾರ ಯಾವುದೇ ಪಾಠಗಳನ್ನು ಕಲಿತಿಲ್ಲ. ಈ ಅಪಘಾತದ ಹೊಣೆಗಾರಿಕೆ ಮೇಲಿಂದ ಪ್ರಾರಂಭವಾಗುತ್ತದೆ. ಈ ಸರ್ಕಾರ ಎಚ್ಚೆತ್ತುಕೊಳ್ಳುವ ಮೊದಲು ಇನ್ನೂ ಎಷ್ಟು ಕುಟುಂಬಗಳು ನಾಶವಾಗಬೇಕು? ಎಂದು ಪ್ರಶ್ನಿಸಿದ್ದಾರೆ.
ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ಅ. 11ರಂದು ಮೈಸೂರು-ದರ್ಭಾಂಗ್ ಬಾಗಮತಿ ಎಕ್ಸ್ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 13 ಬೋಗಿಗಳು ಹಳಿ ತಪ್ಪಿ 19 ಮಂದಿ ಗಾಯಗೊಂಡಿದ್ದರು. ಅಪಘಾತದ ಬಳಿಕ ರೈಲು ಸಂಚಾರ ಸ್ಥಗಿತಗೊಂಡಿದ್ದು, ರೈಲು ಹಳಿಗಳ ಮೇಲೆ ಬಿದ್ದಿರುವ ಬೋಗಿಗಳನ್ನು ತೆರವುಗೊಳಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ತಮಿಳುನಾಡು ಸರ್ಕಾರ ರೈಲು ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಘರ್ಷಣೆಯ ಬಗ್ಗೆ ನಮಗೆ ಮಾಹಿತಿ ಬಂದ ತಕ್ಷಣ 22 ಆಂಬ್ಯುಲೆನ್ಸ್ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅವರ ತಂಗಲು ಮೂರು ಸಭಾಂಗಣಗಳನ್ನು ತೆರೆಯಲಾಗಿದೆ. ಅಗತ್ಯ ಸಾಮಗ್ರಿಗಳನ್ನು ಒದಗಿಸಲಾಗಿದೆ ತಿಳಿಸಿದೆ.