ಹುಬ್ಬಳ್ಳಿ, ಅ.12(DaijiworldNews/AA): ರಾಜ್ಯ ಸರ್ಕಾರ ಸರಿಯಾಗಿ ಹಣಕಾಸು ನಿರ್ವಹಿಸಲಾಗದೇ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಯುಪಿಎ ಅವಧಿಗಿಂತ ದುಪ್ಪಟ್ಟು ಅನುದಾನವನ್ನು ಎನ್ಡಿಎ ಸರ್ಕಾರ ಕೊಟ್ಟಿದೆ. ರಾಜ್ಯಗಳಿಗೆ ಅನುದಾನ ಹಂಚಿಕೆ ತೀರ್ಮಾನಿಸುವುದು ಕೇಂದ್ರ ಸರ್ಕಾರ ಮಾಡಿಲ್ಲ. ಹಣಕಾಸು ಆಯೋಗ ನಿಗದಿಪಡಿಸಿದಷ್ಟು ಹಣವನ್ನು ಕೇಂದ್ರ ನೀಡಿದೆ ಎಂದು ತಿಳಿಸಿದರು.
2016-17ರಲ್ಲಿ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಇದ್ದ ಹಣಕಾಸು ಆಯೋಗ ಅನುದಾನ ಹಂಚಿಕೆ ನಿಗದಿಪಡಿಸಿದೆ. ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ ಎನಿಸಿದ್ದರೆ ಆಯೋಗದ ಮುಂದೆ ಆಗಲೇ ಸಮರ್ಪಕ ವಾದ ಮಂಡಿಸಬೇಕಿತ್ತು. ಆಗ ಧ್ವನಿ ಎತ್ತದೆ ಈಗ ತಗಾದೆ ತೆಗೆಯುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತಮ್ಮ ಸರ್ಕಾರದಲ್ಲಿನ ಅಧಿಕಾರಿಗಳೇ ತಪ್ಪು ಮಾಡಿದ್ದಾರೆ ಎಂಬುದನ್ನು ಸಿಎಂ ಒಪ್ಪಿಕೊಂಡಿದ್ದಾರೆ. ಈಗಲಾದರೂ ಹಣಕಾಸು ಆಯೋಗದ ಮುಂದೆ ಸರಿಯಾದ ವಾದ ಮಂಡಿಸಿ ಎಂದು ಸಲಹೆ ನೀಡಿದ ಅವರು, ಪ್ರತಿ 5 ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚಿಸುತ್ತಿದ್ದು, ಈಗ ಮತ್ತೊಮ್ಮೆ ರಚನೆ ನಡೆದಿದೆ. ಹೊಸ ಹಣಕಾಸು ಆಯೋಗದ ಮುಂದಾದರೂ ರಾಜ್ಯಕ್ಕೆ ಏನು ಬೇಕೆಂಬುದನ್ನು ಸರಿಯಾಗಿ ಮಂಡಿಸಿ ಎಂದರು.
ಹಾಗೆ ನೋಡಿದರೆ ರಾಜ್ಯಕ್ಕೆ ಯುಪಿಎಗಿಂತ ಎನ್ಡಿಎ ಸರ್ಕಾರವೇ ಹೆಚ್ಚು ಹಣಕಾಸು ಒದಗಿಸಿದೆ. ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ 49 ಕೋಟಿ ರೂ. ಗ್ರ್ಯಾಂಟೆಡ್ ಅನುದಾನ ಬಂದಿದ್ದರೆ, ಎನ್ಡಿಎ ಸರ್ಕಾರ 3 ಕೋಟಿ ರೂ. ಕೊಟ್ಟಿದೆ. ಇನ್ನೂ ರಾಜ್ಯದ ಪಾಲಿನ ತೆರಿಗೆ ಬಾಬ್ತು ಯುಪಿಎ ಬರೀ 63 ಕೋಟಿ ರೂ. ಕೊಟ್ಟಿದ್ದರೆ, ತಮ್ಮ ಸರ್ಕಾರ 3.25 ಕೋಟಿ ರೂ. ತೆರಿಗೆ ಹಂಚಿಕೆ ಬಿಡುಗಡೆ ಮಾಡಿದೆ ಎಂದು ಹೇಳಿದರು.