ಮುಂಬೈ,ಅ.13(DaijiworldNews/TA):ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್ಸಿಪಿಯ ಅಜಿತ್ ಪವಾರ್ ಬಣದ ಸದಸ್ಯ ಬಾಬಾ ಸಿದ್ದಿಕ್ ಅವರು ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ 9.30ರ ಸುಮಾರಿಗೆ ಬಾಂದ್ರಾ ಪೂರ್ವದ ಶಾಸಕರಾದ ಸಿದ್ದಿಕ್ ಅವರ ಪುತ್ರ ಜೀಶಾನ್ ಅವರ ಕಚೇರಿ ಬಳಿ ಶೂಟರ್ಗಳು ಆರು ಗುಂಡುಗಳನ್ನು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನು ಬಂಧಿಸಲಾಗಿದೆ.
ಸಿದ್ದಿಕ್ ಅವರನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ 66ರ ಹರೆಯದ ಎನ್ಸಿಪಿ ನಾಯಕನಿಗೆ ನಾಲ್ಕು ಗುಂಡುಗಳು ತಗುಲಿದ್ದು ಚಿಕಿತ್ಸೆ ಫಲಕಾರಿಯಾಗಿಲ್ಲ. ಅವರ ಒಬ್ಬ ಸಹಾಯಕನಿಗೆ ಗುಂಡೇಟಿನಿಂದ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ. ದಸರೆಯಂದು ಗುಂಡಿನ ದಾಳಿ ನಡೆದಿದ್ದು, ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ತಿಂಗಳುಗಳ ಮುನ್ನವೇ ಗುಂಡಿನ ದಾಳಿ ನಡೆದಿದೆ.
ಹಿರಿಯ ರಾಜಕಾರಣಿಯನ್ನು ಗುಂಡಿಕ್ಕಿ ಕೊಂದ ಕೆಲವೇ ಗಂಟೆಗಳ ನಂತರ ಮುಂಬೈ ಪೊಲೀಸರು ಹಂತಕರು ಮತ್ತು ಸಂಚುಕೋರರನ್ನು ಪತ್ತೆಹಚ್ಚಲು ಹಲವು ಸ್ಥಳಗಳಲ್ಲಿ ತಂಡಗಳನ್ನು ನಿಯೋಜಿಸಿದ್ದಾರೆ.
ಸಿದ್ದಿಕ್ (66) ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ತೊರೆದು ಎನ್ಸಿಪಿ ಸೇರಿದ್ದರು. ಇಬ್ಬರು ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್ ಮತ್ತು ವಿಶೇಷ ಕಮಿಷನರ್ ದೇವೆನ್ ಭಾರ್ತಿ ಖುದ್ದಾಗಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.