ಬೆಂಗಳೂರು,ಜೂ02(DaijiworldNews/AZM) : ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಎಸ್ ಐಟಿ ಬಂಧಿಸಿದೆ.
ಆರೋಪಿಯನ್ನು ಬೆಳಗಾವಿ ನಿವಾಸಿ ಪ್ರವೀಣ್ ಪ್ರಕಾಶ್ ಚತುರ್ (27) ಎಂದು ಗುರುತಿಸಲಾಗಿದ್ದು,ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹಾಗೂ ಜೂನ್ 7ರ ತನಕ ಎಸ್ಐಟಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ..
ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆಯನ್ನು ಎಸ್ಐಟಿ ವಿಚಾರಣೆ ನಡೆಸಿದ್ದಾಗ ಪ್ರವೀಣ್ ಹೆಸರನ್ನು ಆತ ಹೇಳಿದ್ದ. ಎಸ್ಐಟಿ ತಂಡ ಬೆಳಗಾವಿಯಲ್ಲಿ ಪ್ರವೀಣ್ನನ್ನು ಬಂಧಿಸಿ, ಧಾರವಾಡದಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಬೆಂಗಳೂರಿಗೆ ಕರೆತರಲಾಗಿದೆ.
ಗೌರಿ ಲಂಕೇಶ್ ಮತ್ತು ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಅವರು ಬಂಧನವನ್ನು ಖಚಿತಪಡಿಸಿದ್ದಾರೆ. 'ಆರೋಪಿ ವಿಚಾರಣೆ ಮುಗಿದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುತ್ತದೆ' ಎಂದು ಹೇಳಿದ್ದಾರೆ.
ಎಂ.ಎಂ.ಕಲಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಎಸ್ಐಟಿ ಮಾಡಬೇಕು. ಧಾರವಾಡದಲ್ಲಿರುವ ಕರ್ನಾಟಕ ಹೈಕೋರ್ಟ್ ಸಂಚಾರಿ ಪೀಠ ಅದರ ಮೇಲ್ವಿಚಾರಣೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ.
2015ರ ಆಗಸ್ಟ್ 30ರಂದು ಎಂ.ಎಂ.ಕಲಬುರ್ಗಿ ಅವರ ಹತ್ಯೆ ನಡೆದಿತ್ತು. ಧಾರವಾಡದ ಕಲ್ಯಾಣ ನಗರದಲ್ಲಿರುವ ಅವರ ಮನೆಗೆ ಆಗಮಿಸಿದ್ದ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು.