ಮುಂಬೈ, ಅ.13(DaijiworldNews/TA):ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್ಸಿಪಿಯ ಅಜಿತ್ ಪವಾರ್ ಬಣದ ಸದಸ್ಯ ಬಾಬಾ ಸಿದ್ದಿಕ್ ಅವರು ಮುಂಬೈನ ಬಾಂದ್ರಾದಲ್ಲಿ ಗುಂಡಿನ ದಾಳಿಯಿಂದ ಸಾವನ್ನಪ್ಪಿದ್ದಾರೆ. ಶನಿವಾರ ರಾತ್ರಿ 9.30ರ ಸುಮಾರಿಗೆ ಬಾಂದ್ರಾ ಪೂರ್ವದ ಶಾಸಕರಾದ ಸಿದ್ದಿಕ್ ಅವರ ಪುತ್ರ ಜೀಶಾನ್ ಅವರ ಕಚೇರಿ ಬಳಿ ಶೂಟರ್ಗಳು ಆರು ಗುಂಡುಗಳನ್ನು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇಬ್ಬರನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ, ವಿಚಾರಣೆಯ ಸಮಯದಲ್ಲಿ ಶೂಟರ್ಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನೊಂದಿಗೆ ಸಂಬಂಧವನ್ನು ಹೊಂದಿದ್ದರು ಎಂದು ಹೇಳಲಾಗಿದೆ. ವಿಚಾರಣೆ ವೇಳೆ ಅವರಿಬ್ಬರೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಕಳೆದ ಒಂದು ತಿಂಗಳಿನಿಂದ ಸಿದ್ದಿಕ್ನ ಚಲನವಲನಗಳ ಮೇಲೆ ನಿಗಾ ಇರಿಸಿದ್ದಾಗಿಯೂ ಒಪ್ಪಿಕೊಂಡಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್ ಜೈಲಿನಲ್ಲಿದ್ದಾನೆ. ಆದ್ರೆ ಅವನ ಗ್ಯಾಂಗ್ನಿಂದ ಉದ್ಯಮಿಗಳು, ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಕರೆಗಳು ಬರುತ್ತಲೇ ಇವೆ ಎಂದು ಹೇಳಲಾಗಿದೆ. ಸದ್ಯ ಬಿಷ್ಣೋಯ್ ಗ್ಯಾಂಗ್ನಲ್ಲಿ 700ಕ್ಕೂ ಹೆಚ್ಚು ಶೂಟರ್ಗಳಿದ್ದಾರೆ. ದೇಶಾದ್ಯಂತ ಅನೇಕ ಸಣ್ಣ ಮತ್ತು ದೊಡ್ಡ ಕ್ರಿಮಿನಲ್ಗಳು ಅವನಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.