ಬೆಂಗಳೂರು, ಅ.13(DaijiworldNews/AA): ಒಳಮೀಸಲಾತಿಯ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಆದರೂ ಕಾಂಗ್ರೆಸ್ ಮಾತ್ರ ಮೀನಾಮೇಷ ಎಣಿಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿಗೆ ಪ್ರಧಾನಿ ನರೇಂದ್ರ ಮೋದಿಯವರ ಸಹಮತವಿದೆ. ತೆಲಂಗಾಣಕ್ಕೆ ಬಂದಾಗ ಒಳ ಮೀಸಲಾತಿಗೆ ಮೋದಿ ಅನುಮೋದನೆ ನೀಡಿದ್ದರು. ಹಿಂದೆ ಬಿಜೆಪಿ ಸರ್ಕಾರ ಕೂಡ ಈ ಕುರಿತು ಪ್ರಯತ್ನ ಮಾಡಿತ್ತು. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು, ಒಳಮೀಸಲಾತಿ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ. ಜಾತಿಗಣತಿಯ ಬಗ್ಗೆ ಶಂಖ ಊದುತ್ತಿರುತ್ತಾರೆ. ಒಳಮೀಸಲಾತಿಗೆ ಕಾಂಗ್ರೆಸ್ ಮಾತ್ರ ಇನ್ನೂ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಈಗ ಬರೀ ಎಸ್ಐಟಿ ಕಂಡುಬರುತ್ತಿದೆ. ಒಳಮೀಸಲಾತಿ ಮತ್ತು ಜಾತಿಗಣತಿ ವಿಚಾರದಲ್ಲೂ ಕಾಂಗ್ರೆಸ್ ಸರ್ಕಾರ ಎಸ್ಐಟಿ ರಚಿಸಿದರೆ ಅಚ್ಚರಿ ಇಲ್ಲ. ಇಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕಾನೂನು ಅನ್ವಯವಾಗುತ್ತಿದ್ದು, ಎಸ್ಐಟಿಯ ಮೇಲೆ ಅನುಮಾನ ಹೆಚ್ಚಾಗಿ ಅದನ್ನೇ ತನಿಖೆ ಮಾಡುವ ಸ್ಥಿತಿ ಬಂದಿದೆ. ಎಸ್ಐಟಿ ಪ್ರಕಾರ, ಶಾಸಕ ಮುನಿರತ್ನ ಅವರಿಗೆ ಒಂದು ಕಾನೂನು, ವಿನಯ್ ಕುಲಕರ್ಣಿ ಅವರಿಗೆ ಒಂದು ಕಾನೂನು ಎಂಬಂತಾಗಿದೆ. ಎಸ್ಐಟಿಗಳ ನಿಜಬಣ್ಣ ಬಯಲು ಮಾಡಲು ಡಬಲ್ ಎಸ್ಐಟಿ ಎಂಬ ಘಟಕ ಸ್ಥಾಪಿಸಬೇಕಿದೆ ಎಂದು ಕಿಡಿಕಾರಿದ್ದಾರೆ.