ಮೈಸೂರು, ಅ.13(DaijiworldNews/AA): ಚನ್ನಪಟ್ಟದಲ್ಲಿ ತಳಮಟ್ಟದಿಂದ ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸಲಾಗುತ್ತಿದೆ. ನಾವು ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸದ ಮೇಲೆ ಜನರು ವಿಶ್ವಾಸವನ್ನು ಇಡುತ್ತಾರೆ ಎನ್ನುವ ನಂಬಿಕೆಯಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಖಾಸಗಿ ಹೋಟೆಲ್ ಬಳಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಚನ್ನಪಟ್ಟಣದ ಉಪಚುನಾವಣೆಗೆ ನಾವು ವೇದಿಕೆಯನ್ನು ಸಿದ್ಧಪಡಿಸುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತ ಬಂದಿತ್ತು. ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಡಿಮೆ ಮತ ಬಂದಿತ್ತು ಎಂದರು.
ಜೆಡಿಎಸ್ ತನ್ನ ಪಕ್ಷದ ಅಭ್ಯರ್ಥಿಯನ್ನಾಗಿ ಯಾರನ್ನಾದರೂ ನಿಲ್ಲಿಸಿಕೊಳ್ಳಲಿ. ಅದು ಅವರ ಪಕ್ಷದ ಆಂತರಿಕ ವಿಚಾರ. ಚನ್ನಪಟ್ಟಣದಲ್ಲಿ ವ್ಯಕ್ತಿಯ ಮೇಲೆ ಚುನಾವಣೆ ನಡೆಯುವುದು ಬಿಟ್ಟು, ಪಕ್ಷದ ಸಿದ್ಧಾಂತದ ಮೇಲೆ ಚುನಾವಣೆ ನಡೆಯಬೇಕು ಎಂದು ನಾನು ಕೆಲಸ ಮಾಡುತ್ತಿದ್ದೇನೆ. ಎನ್ಡಿಎ, ದಳ, ಬಿಜೆಪಿ ಯಾವ ಅಭ್ಯರ್ಥಿಯನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಲಿ, ನಾನು ಅವರ ವಿಚಾರಕ್ಕೆ ತಲೆ ಹಾಕುವುದಿಲ್ಲ. ಈಗ ನಮ್ಮ ಮನೆಯನ್ನು ನಾವು ರಿಪೇರಿ ಮಾಡಿಕೊಂಡರೆ ಸಾಕು ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ಡಿ.ಕೆ.ಶಿವಕುಮಾರ್ ಕುಟುಂಬಸ್ಥರು ಚುನಾವಣೆ ನಿಲ್ಲುವ ಬಗ್ಗೆ ಮಾತನಾಡಿದ ಅವರು, ನನ್ನ ಕುಟುಂಬದವರು ಯಾರೂ ಚುನಾವಣೆಗೆ ನಿಲ್ಲುವುದಿಲ್ಲ. ನಾನೇ ಅಭ್ಯರ್ಥಿ, ನನ್ನ ಹೆಸರಿನಲ್ಲಿಯೇ ಮತ ಕೇಳುವುದು ಎಂದು ಸ್ಪಷ್ಟನೆ ನೀಡಿದರು.