ಮುಂಬೈ, ಅ.13(DaijiworldNews/AA): ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಓರ್ವ ಕೊಲೆ ಆರೋಪಿಯನ್ನು ಅಕ್ಟೋಬರ್ 21ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಮುಂಬೈ ಕೋರ್ಟ್ ಆದೇಶ ಹೊರಡಿಸಿದೆ.
ಬಂಧಿತ ಆರೋಪಿಗಳನ್ನು ಹರಿಯಾಣ ಮೂಲದ ಗುರ್ಮೈಲ್ ಸಿಂಗ್ ಹಾಗೂ ಉತ್ತರ ಪ್ರದೇಶ ಮೂಲದ ಧರ್ಮರಾಜ್ ಸಿಂಗ್ ಕಶ್ಯಪ್ ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಮುಂಬೈ ಪೊಲೀಸರು ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಮುಂಬೈನ ಎಸ್ಪ್ಲೇನೇಡ್ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಈ ಇಬ್ಬರು ಆರೋಪಿಗಳ ಪೈಕಿ ಗುರ್ಮೈಲ್ ಸಿಂಗ್ನನ್ನು ಅ.21ರವರೆಗೆ ಮುಂಬೈ ಕ್ರೈಂ ಬ್ರ್ಯಾಂಚ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ.
ಪ್ರಕರಣದಲ್ಲಿ ಬಂಧಿತನಾಗಿರುವ ಇನ್ನೋರ್ವ ಆರೋಪಿ ಧರ್ಮರಾಜ್ ಸಿಂಗ್ ಕಶ್ಯಪ್ ತಾನು ಅಪ್ರಾಪ್ತ ಎಂದು ಕೋರ್ಟ್ ಗೆ ತಿಳಿಸಿದ್ದಾನೆ. ಹೀಗಾಗಿ ಕೋರ್ಟ್, ಆತನಿಗೆ ಮೂಳೆ ಪರೀಕ್ಷೆಯ ಬಳಿಕ ಮತ್ತೆ ಕೋರ್ಟ್ಗೆ ಹಾಜರುಪಡಿಸುವಂತೆ ಸೂಚನೆ ನೀಡಿದೆ.