ಚಂಡೀಗಢ, ಅ.14(DaijiworldNews/AA): ಯುಪಿಎಸ್ಸಿಗೆ ಯಾವುದೇ ಕೋಚಿಂಗ್ ಪಡೆಯದೆ ಹಾಗೂ ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದೆಂದರೆ ಕಷ್ಟಸಾಧ್ಯ. ಆದರೆ ಚಂದ್ರಜ್ಯೋತಿ ಸಿಂಗ್ ಅವರು ಯುಪಿಎಸ್ಸಿಗೆ ಯಾವುದೇ ಕೋಚಿಂಗ್ ಪಡೆಯದೆ ತಮ್ಮ ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಐಎಎಸ್ ಅಧಿಕಾರಿಯಾಗಿದ್ದಾರೆ. ಅವರ ಯಶಸ್ಸಿನ ಕಥೆ ಇಲ್ಲಿದೆ ನೋಡಿ.
ಚಂದ್ರಜ್ಯೋತಿ ಅವರು ಮಾಜಿ ಸೇನಾ ಅಧಿಕಾರಿಗಳ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಕರ್ನಲ್ ದಲ್ಬಾರಾ ಸಿಂಗ್ ಸೈನ್ಯದ ವಿಕಿರಣಶಾಸ್ತ್ರಜ್ಞರಾಗಿದ್ದರು. ಹಾಗೂ ತಾಯಿ ಲೆಫ್ಟಿನೆಂಟ್ ಕರ್ನಲ್ ಮೀನಾ ಸಿಂಗ್. ಸೇನೆಯ ಅಧಿಕಾರಿಗಳಾದ ಆಕೆಯ ತಂದೆ-ತಾಯಿ ಚಂದ್ರಜ್ಯೋತಿ ಅವರಿಗೆ ಯಾವಾಗಲೂ ಸ್ಫೂರ್ತಿ ನೀಡುತ್ತಾ ಬೆನ್ನೆಲುಬಾಗಿದ್ದರು.
ಚಂದ್ರಜ್ಯೋತಿ ಅವರು ಚಂಡೀಗಢದ ಭವನ ವಿದ್ಯಾಲಯದಿಂದ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಶೇ. 95.4 ಅಂಕಗಳನ್ನು ಮತ್ತು ಜಲಂಧರ್ನ ಅಪೀಜಯ್ ಶಾಲೆಯಿಂದ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 10 ಸಿಜಿಪಿಎ ಅಂಕಗಳನ್ನು ಪಡೆದಿದ್ದರು. ಅವರು ತಮ್ಮ ಅಧ್ಯಯನವನ್ನು ಮುಂದುವರೆಸಿದರು. 2018ರಲ್ಲಿ ದೆಹಲಿ ವಿಶ್ವವಿದ್ಯಾಲಯದ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ 7.75ರ ಸಿಜಿಪಿಎ ಮತ್ತು ಇತಿಹಾಸದಲ್ಲಿ ಹಾನರ್ ಪದವಿ ಗಳಿಸಿದರು.
ಪದವಿ ಪೂರ್ಣಗೊಳಿಸಿದ ನಂತರ ಐಎಎಸ್ ಅಧಿಕಾರಿ ಚಂದ್ರಜ್ಯೋತಿ ಸಿಂಗ್ ಅವರು ಯುಪಿಎಸ್ಸಿಗೆ ತಯಾರಿ ಮಾಡಲು ಒಂದು ವರ್ಷ ತೆಗೆದುಕೊಂಡರು. ತಮ್ಮ ಅಚಲವಾದ ಗುರಿಯೊಂದಿಗೆ ಚಂದ್ರಜ್ಯೋತಿ ಸಿಂಗ್ ಅವರು, ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ 28ನೇ ರ್ಯಾಂಕ್ ಕೂಡ ಪಡೆದರು. ಈ ಮೂಲಕ ಅವರು ಐಎಎಸ್ ಅಧಿಕಾರಿಯೂ ಆದರು.