ರಾಯಚೂರು,ಜೂ02(DaijiworldNews/AZM)ರಾಯಚೂರು ಜಿಲ್ಲೆಯ ದೊಡ್ಡಿಗಳಿಗೆ ಹಳ್ಳಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕೋರಿ ಆ ಊರಿನ ಯುವಕನೋರ್ವ ಪ್ರಧಾನಿ ನರೇಂದ್ರ ಮೋದಿಯವರಿಗೆ ಮಾಡಿದ ಟ್ವೀಟ್ ಗೆ ಸ್ಪಂದನೆ ದೊರೆತ್ತಿದ್ದು, ಹಳ್ಳಿಗೆ ಕರೆಂಟ್ ಲಭ್ಯವಾಗಿದೆ.
ದೇವರಭೂಪುರ ಗ್ರಾಪಂ ವ್ಯಾಪ್ತಿಯ ಗುಳೇದಾರದೊಡ್ಡಿ, ಕಾಳಪ್ಪನದೊಡ್ಡಿ, ಗಲಗಿನದೊಡ್ಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕೋರಿ 2018ರ ಸೆ.15ರಂದು ಟ್ವೀಟ್ ಮೂಲಕ ಅಮರೇಶ ಎಂಬ ಯುವಕ ಮನವಿ ಮಾಡಿದ್ದರು. ಇದಕ್ಕೆ ಕೇಂದ್ರ ಸರ್ಕಾರದ ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೇರೇಷನ್ ಲಿ. ಸಚಿವಾಲಯದಿಂದ ಜೆಸ್ಕಾಂ ಇಲಾಖೆಗೆ ಸೂಚನೆ ಬಂದಿದ್ದು, ಅದರ ಪ್ರತಿ ಅಮರೇಶ ಕೈಗೆ ಸೇರಿದೆ.
ಅಮರೇಶರನ್ನು ದೂರವಾಣಿ ಮೂಲಕ ಸಂರ್ಪಸಿದ ಲಿಂಗಸುಗೂರು ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳ ಒಂದು ತಿಂಗಳೊಳಗೆ ದೊಡ್ಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೀಟರ್ ಅಳವಡಿಸಿಕೊಳ್ಳಲು ಹಾಗೂ ಗುತ್ತಿಗೆದಾರರಿಗೆ ನಿಗದಿತ ಶುಲ್ಕ ನೀಡಲು ರೈತರಿಗೆ ಕಷ್ಟವಾಗುತ್ತಿದ್ದ ಕಾರಣ, ಕೇಂದ್ರದ ಸೌಭಾಗ್ಯ ಯೋಜನೆಯಲ್ಲಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಮನವಿಗೆ ಎಇಇ ಸಮ್ಮತಿಸಿದ್ದಾರೆ.
3 ತಿಂಗಳ ಹಿಂದೆಯೇ ವಿದ್ಯುತ್ ಪರಿಕರಗಳು ಬಂದಿದ್ದು, 15 ದಿನಗಳಿಂದ ವಿದ್ಯುತ್ ಕಂಬ, ತಂತಿ ಎಳೆದು ಮನೆಗಳಿಗೆ ಮೀಟರ್, ಒಂದು ವಿದ್ಯುತ್ ದೀಪ, ಸ್ವಿಚ್ ಬೋರ್ಡ್ ಅಳವಡಿಸಲಾಗಿದೆ. ವಾರದಲ್ಲಿ ಸಂಪರ್ಕ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.