ಚೆನ್ನೈ, ಅ.15(DaijiworldNews/AK): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮಳೆಯ ಪರಿಣಾಮ ಚೆನ್ನೈ ಸೇರಿದಂತೆ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಜೆ ಘೋಷಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳ ಕಾಲ ತಮಿಳುನಾಡಿನಲ್ಲಿ ಹೆಚ್ಚಿನ ಮಳೆಯಾಗುವ ಮುನ್ಸೂಚನೆಯನ್ನೂ ನೀಡಿದೆ. ಈ ಜಿಲ್ಲೆಗಳ ಐಟಿ ಕಂಪನಿಗಳ ಉದ್ಯೋಗಿಗಳಿಗೆ ಅಕ್ಟೋಬರ್ 15 ರಿಂದ 18ರವರೆಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡುವ ಸಲಹೆಯನ್ನು ನೀಡುವಂತೆ ಅಧಿಕಾರಿಗಳಿಗೆ ಸ್ಟಾಲಿನ್ ಸೂಚನೆ ನೀಡಿದ್ದಾರೆ.
ಮಳೆಯಾಗುತ್ತಿರುವ ಭಾಗಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಹಾಯವಾಣಿ ಆರಂಭಿಸಿದೆ. ಸಹಯಾಕ್ಕಾಗಿ 1070, ಜಿಲ್ಲಾ ಸಹಾಯವಾಣಿ 1077, ವಾಟ್ಸಪ್ ಸಂಖ್ಯೆ 9445869848ಕ್ಕೆ ಸಂಪರ್ಕಿಸಲು ಕೋರಲಾಗಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ತಮಿಳುನಾಡಿನ 10 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅ.15-17ರವರೆಗೆ ತಮಿಳುನಾಡು ಕರಾವಳಿಯ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ