ನವದೆಹಲಿ, ಜೂ 02: (Daijiworld News/SM): ಕಳೆದ 1 ತಿಂಗಳಿಂದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆಗಳು ಸ್ಥಿರವಾಗಿತ್ತು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬೆಲೆ ಏರಿಕೆ ಮಾಡದೆ ನಷ್ಟ ಅನುಭವಿಸಿದ್ದವು. ಆದರೆ, ನಷ್ಟ ಸರಿಹೊಂದಿಸಲು ಇದೀಗ ಕಂಪೆನಿಗಳು ಮುಂದಾಗಿವೆ. ಮೋದಿ ಸರಕಾರ ಮತ್ತೆ ಅಧಿಕಾರಿ ಹಿಡಿದ ಬಳಿಕ ಇದೀಗ ಬೆಲೆ ಹೆಚ್ಚಳ ಆರಂಭಿಸಿವೆ.
ಹಂತ ಹಂತವಾಗಿ ಬೆಲೆ ಏರಿಕೆ ಆರಾಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮುಂದುವರೆದಿದೆ. ಈಗ ಗೃಹ ಬಳಕೆಯ 14.2 ಕೆಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದೆ. ಆದರೆ, ಏರ್ ಟರ್ಬೈನ್ ಇಂಧನ (ಎಟಿಎಫ್) ಬೆಲೆ ತಗ್ಗಿಸಲಾಗಿದೆ.
ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ದರ ಸುಮಾರು 25 ರೂ. ಹೆಚ್ಚಿಸಲಾಗಿದೆ. ನೂತನ ದರ ಜೂನ್ 1 ರಿಂದಲೇ ಜಾರಿಗೆ ಬಂದಿದೆ. ಸಬ್ಸಿಡಿ ಹೊಂದಿರುವ ಗ್ಯಾಸ್ ಸಿಲಿಂಡರ್ ಬೆಲೆ 1.23 ರೂ.ಏರಿಕೆಯಾಗಿದೆ. ಇದು ಸತತ ನಾಲ್ಕನೇ ಬಾರಿಗೆ ಎಲ್ ಪಿಜಿ ಬೆಲೆ ಏರಿಕೆಯಾದಂತಾಗಿದೆ.
ಪ್ರಸ್ತುತ 14.2 ಕೆಜಿ ಎಲ್.ಪಿ.ಜಿ. ಸಿಲಿಂಡರ್ ಬೆಲೆ 771.50 ರೂಪಾಯಿಯಾಗಿದೆ. ವಾಣಿಜ್ಯ ಉದ್ದೇಶಿತ ಅಡುಗೆ ಅನಿಲ ಸಿಲಿಂಡರ್(19 ಕೆಜಿ) ಬೆಲೆ ಕೂಡ ಪರಿಷ್ಕರಣೆ ಮಾಡಲಾಗಿದೆ. 5 ಕೆಜಿ ಗೃಹ ಬಳಕೆಯ ಅಡುಗೆ ಅನಿಲ ಬೆಲೆ 282.50 ರೂಪಾಯಿಗೆ ಏರಿಕೆಯಾಗಿದೆ. ಮತ್ತೊಮ್ಮೆ ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನತೆಗೆ ಮತ್ತಷ್ಟು ಹೊಸ ಯೋಜನೆಗಳು ದೊರೆಯುತ್ತವೆ ಎನ್ನುವಾಗಲೇ ಇಂಧನ ದರ ಏರಿಕೆ ಹೊಸ ಶಾಕ್ ನೀಡಿದೆ.