ಮಂಡ್ಯ, ಜೂ 02: (Daijiworld News/SM): ರಾಜ್ಯದ ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೋಲುಂಡಿದ್ದು, ಪಕ್ಷೇತರ ಅಭ್ಯರ್ಥಿ ಸುಮಲತಾ ಭರ್ಜರಿ ಗೆಲುವು ದಾಖಲಿಸಿದ್ದು ಸಿಎಂ ಅವರಿಗೆ ತೀವ್ರ ಮುಜುಗರವನ್ನುಂಟು ಮಾಡಿದ ವಿಚಾರವಾಗಿದೆ. ಚುನಾವಣೆಯ ರಿಸಲ್ಟ್ ಬಂದು ವಾರ ಕಳೆದ ಬಳಿಕ ಇದೀಗ ಇವಿಎಂ ಮೇಲೆ ಅನುಮಾನಗಳು ವ್ಯಕ್ತಪಡಿಸಲಾಗಿದೆ.
ಈ ಬಗ್ಗೆ ನಾಗಮಂಗಲ ಶಾಸಕ ಸುರೇಶ್ ಗೌಡ ಗಂಭೀರ ಆರೋಪ ಮಾಡಿದ್ದಾರೆ. ಮಂಡ್ಯ ಜನರು ಪುರಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ಗೆ ಮತಹಾಕಿ ಗೆಲ್ಲಿಸುತ್ತಾರೆ. ಆದರೆ ಅದೇ ಮತದಾರರು ಲೋಕಸಭಾ ಚುನಾವಣೆಯಲ್ಲಿ ಬೇರೆ ಅಭ್ಯರ್ಥಿ ಪರ ಮತ ಚಲಾಯಿಸಲು ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ಚುನಾವಣೆಗಾಗಿ ಇವಿಎಂ ಸಂಶೋಧಿಸಿದ ರಾಷ್ಟ್ರ ಜಪಾನ್. ಆದರೆ, ಅದೇ ದೇಶದಲ್ಲಿ ಇದೀಗ ಇವಿಎಂ ಬಳಕೆ ಮಾಡುವುದಿಲ್ಲ. ಅವರಿಗೆ ತಾವೇ ಕಂಡು ಹಿಡಿದ ಯಂತ್ರದ ಮೇಲೆ ನಂಬಿಕೆ ಇಲ್ಲ. ಆದರೆ ನಮ್ಮಲ್ಲಿ ಮಾತ್ರ ಇಂದಿಗೂ ಇವಿಎಂ ಬಳಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಆದರೆ, ಲೋಕಸಭೆಯಲ್ಲಿ ಸಾಕಷ್ಟು ಅಂತರದಲ್ಲಿ ಸೋಲುಂಡಿದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಅನುಮಾನವಿದೆ. ಆದ್ದರಿಂದ ಇವಿಎಂ ಬಗ್ಗೆ ತನಿಖೆ ನಡೆಸಬೇಕು ಎಂದು ಸುರೇಶ್ ಗೌಡ ಆಗ್ರಹಿಸಿದ್ದಾರೆ.